ಮಂಗಳೂರು/ಉಡುಪಿ: ಮುಂಗಾರು ಬಿರುಸು ಪಡೆದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆ. 4ರಿಂದ 6ರ ವರೆಗೆ ಕರಾವಳಿ ಭಾಗದಲ್ಲಿ “ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಈ ವೇಳೆ ಭಾರೀ ಮಳೆ, ಗಾಳಿ ಮತ್ತು ಸಮುದ್ರದ ಅಬ್ಬರ ಹೆಚ್ಚಿರುವ ನಿರೀಕ್ಷೆ ಇದೆ.
ದ.ಕ. ಜಿಲ್ಲೆಯಾದ್ಯಂತ ಗುರುವಾರ ದಿನವಿಡೀ ಉತ್ತಮ ಮಳೆಯಾಗಿದೆ. ಮಂಗಳೂರು ನಗರ ದಲ್ಲಿ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ರಾತ್ರಿ ವೇಳೆ ಮಳೆಯ ಬಿರುಸು ಹೆಚ್ಚಿತ್ತು. ಉಡುಪಿಯಲ್ಲಿ ಹಗಲು ಮೋಡದ ವಾತಾವಣ ಇದ್ದು, ಸಂಜೆಯ ಬಳಿಕ ಮಳೆಯಾಗಿದೆ.
ಜಿಲ್ಲೆಯಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪ ನಿರ್ವಹಿಸಲು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸನ್ನದ್ಧವಾಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣ ದಳ (ಎನ್‌ಡಿಆರ್‌ಎಫ್)ದ 20 ಮಂದಿಯ ತಂಡ ಸುಬ್ರಹ್ಮಣ್ಯದಲ್ಲಿ ಸನ್ನದ್ಧವಾಗಿದೆ. ರಾಜ್ಯ ವಿಪತ್ತುದಳ (ಎಸ್‌ಡಿಆರ್‌ಎಫ್)ದ 55 ಮಂದಿಯ ತಂಡ ತಯಾರಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಅಗ್ನಿಶಾಮಕ ದಳ ಕಾರ್ಯಪ್ರವೃತ್ತವಾಗಿದೆ.