ಬಂಟ್ವಾಳ : ಲೈಸನ್ಸ್ ಹೊಂದಿರದ, ಅಪ್ರಾಪ್ತ ವಯಸ್ಸಿನ ಬಾಲಕನೋರ್ವ ಸ್ಕೂಟರ್ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಪರಿಣಾಮ, ಆತನ ತಂದೆ 26,000 ರೂಪಾಯಿ ದಂಡ ಕಟ್ಟಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಎರಡು ದಿನಗಳ ಹಿಂದೆ ಬಂಟ್ವಾಳ ಸಂಚಾರ ಠಾಣಾ ಪೊಲೀಸರು ಎಸ್. ಐ. ಸುತೇಶ್ ನೇತೃತ್ವದಲ್ಲಿ ಅಲ್ಲಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಬಾಲಕನೋರ್ವ ಪರ್ಲಿಯಾ ಸಮೀಪ ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿರುವುದು ಕಂಡುಬಂದಿದೆ. ಆಗ ಆತನನ್ನು ನಿಲ್ಲಿಸಿ ವಿಚಾರಿಸಿದಾಗ ಅಪ್ರಾಪ್ತ ವಯಸ್ಕನಾಗಿದ್ದು, ಲೈಸನ್ಸ್ ಇಲ್ಲದಿರುವುದು ಗೊತ್ತಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಬಳಿಕ ಬಾಲಕನ ತಂದೆ, ಸಮೀರ್ ಎಂಬವರಿಗೆ ಬಂಟ್ವಾಳ ಜೆಎಂಎಫ್ ಸಿ ಕೋರ್ಟಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ನಿಯಮ ಉಲ್ಲಂಘಿಸಿದ್ದಕ್ಕಾಗಿ 26 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಮಕ್ಕಳ ಕೈಗೆ ಸ್ಕೂಟರ್ ಕೊಟ್ಟರೆ ಫೈನ್ ಬೀಳುವುದು ಖಚಿತ ಎಂದು ರಸ್ತೆ ಸುರಕ್ಷತಾ ಸಪ್ತಾಹ ಸಹಿತ ಹಲವು ಬಾರಿ ಪೊಲೀಸರು ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ, ಶಾಲೆ, ಕಾಲೇಜುಗಳಿಗೂ ಹೋಗಿ ಪಾಠ ಮಾಡಿ ಬರುತ್ತಾರೆ. ಆದರೆ ಹೈಸ್ಕೂಲ್ ಗೆ ಹೋಗುವ ಮಕ್ಕಳು ತ್ರಿಬಲ್ ರೈಡಿಂಗ್ ಮಾಡುವುದು, ಜಾಲಿ ರೈಡ್ ಮಾಡುವ ಪ್ರಕರಣಗಳು ಕಂಡುಬರುತ್ತಿವೆ. ಈ ವೇಳೆ ಸಿಕ್ಕಿಬಿದ್ದರೆ, ಸ್ಕೂಟರ್ ನ ಆರ್. ಸಿ. ಹೊಂದಿದವರೇ ಫೈನ್ ಕಟ್ಟಬೇಕಾಗುತ್ತದೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ ಎಂದು ಎಸ್.ಐ. ಸುತೇಶ್ ತಿಳಿಸಿದ್ದಾರೆ.