ಮಂಗಳೂರು : ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲಿಯೂ ಹೆಚ್ಚಿನವರು ಕಾಲೇಜು ವಿದ್ಯಾರ್ಥಿಗಳೇ ಆಗುತ್ತಿದ್ದು, ಪೋಷಕರಲ್ಲಿ, ಸಮಾಜದಲ್ಲಿ ಈ ಕುರಿತು ಆತಂಕ ಹೆಚ್ಚುತ್ತಿದೆ. ಮಕ್ಕಳನ್ನು ಯಾವ ರೀತಿ ನೋಡಿಕೊಳ್ಳುವುದು ಎನ್ನುವುದೇ ಆತಂಕ ಸೃಷ್ಠಿಸುತ್ತದೆ.

ಕೆಲ ದಿನಗಳ ಹಿಂದೆ ಬಂಟ್ವಾಳದ ದಿಗಂತ್ ಎಂಬ ವಿದ್ಯಾರ್ಥಿ ನಾಪತ್ತೆಯಾಗಿದ್ದು, ರಾಜ್ಯದ್ಯಂತ ಈ ಪ್ರಕರಣ ಸಂಚಲನ ಮೂಡಿಸಿತ್ತು. ಆದರೆ ಎರಡು ದಿನಗಳ ಹಿಂದೆ ದಿಗಂತ್ ಪತ್ತೆಯಾಗಿದ್ದಾನೆ. ಪರೀಕ್ಷೆ ಭಯದಿಂದ ಈತ ಮನೆ ಬಿಟ್ಟು ಹೋಗಿದ್ದ ಎಂಬ ವಿಚಾರದಿಂದ ಈ ಕೇಸ್ ಸುಖಾಂತ್ಯ ಕಂಡಿದೆ. ಈ ನಡುವೆ ಮಂಗಳೂರಿನ ಮತ್ತೊಬ್ಬ ಕಾಲೇಜು ವಿದ್ಯಾರ್ಥಿಯ ನಾಪತ್ತೆ ಪ್ರಕರಣ ಸದ್ದು ಮಾಡುತ್ತಿದ್ದು, ಮೂಡು ಪೆರಾದ ನಿತೇಶ್ ಬೆಲ್ಚಡ ಇನ್ನೂ ಕೂಡ ಪತ್ತೆಯಾಗಿಲ್ಲ. ಬಜಪೆ ಮೂಡು ಪೆರಾರ ಗ್ರಾಮದ ಅರ್ಕೆ ಪದವು ನಿವಾಸಿ, ನೀರುಮಾರ್ಗದ ಪ್ಯಾರಾಮೆಡಿಕಲ್ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ನಿತೇಶ್ ಬೆಲ್ಚಡ (19) ಫೆ. 13ರಂದು ನಾಪತ್ತೆಯಾಗಿದ್ದು, ಆತ ಎಲ್ಲಿಗೆ ಹೋಗಿದ್ದಾನೆ ? ಎನ್ನುವ ಸುಳಿವು ಇಲ್ಲಿಯವರೆಗೆ ಸಿಕ್ಕಿಲ್ಲ. ಇದೀಗ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ವಿಶೇಷ ತಂಡ ರಚಿಸಿ ನಾಪತ್ತೆಯಾಗಿರುವ ವಿದ್ಯಾರ್ಥಿಯನ್ನು ಪತ್ತೆ ಮಾಡುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.