ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪಟಾಕಿ ಮಾರಾಟಕ್ಕೆ ನೀಡಲಾಗಿದ್ದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಹಿಂಪಡೆದ ಪೊಲೀಸ್ ಇಲಾಖೆಯ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. ಬೆಂಗಳೂರಿನಲ್ಲಿ ಪಟಾಕಿ ಮಾರಾಟ ಮಾಡುವಂತಿಲ್ಲ ಎಂಬ ಆದೇಶವನ್ನು ಎತ್ತಿ ಹಿಡಿದಿದೆ.
ಇದೇ ಮೊದಲ ಬಾರಿಗೆ ಪಟಾಕಿಗಳಿಂದ ಗಾಯಗೊಂಡವರ ಫೋಟೋಗಳನ್ನು ತೀರ್ಪಿನ ಪ್ರತಿಗಳಲ್ಲಿ ಬಳಸಲಾಗಿದೆ. ಪಟಾಕಿ ಗಾಯಗಳಿಂದ ದೃಷ್ಟಿ ಕಳೆದುಕೊಂಡ ಯುವಕರು ಮತ್ತು ಮಕ್ಕಳ ಫೋಟೋಗಳು ಇದರಲ್ಲಿವೆ.
ಬೆಂಗಳೂರಲ್ಲಿ ಪಟಾಕಿ ಮಾರುವಂತಿಲ್ಲ ಎಂಬ ಆದೇಶ ಎತ್ತಿಹಿಡಿದಿರುವ ಹೈಕೋರ್ಟ್, “ಈ ಫೋಟೋಗಳು ಸಂವಿಧಾನ ರಚನಾಕಾರರನ್ನು ಅವರ ಸಮಾಧಿಯಲ್ಲೇ ನಡುಗಿಸುವಂತಿವೆ. ಬದುಕುವ ಹಕ್ಕು, ಅಂಗ ಮತ್ತು ಸ್ವಾತಂತ್ರ್ಯದ ಹೆಚ್ಚಿನ ಉಲ್ಲಂಘನೆ ಸಾಧ್ಯವಿಲ್ಲ” ಎಂದು ಹೇಳಿದೆ. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠವು ಪೊಲೀಸ್ ಇಲಾಖೆಯ ನಿರ್ಧಾರವನ್ನು ಪ್ರಶ್ನಿಸಿದ ಪಟಾಕಿ ವ್ಯಾಪಾರಿಗಳ ವಾದವನ್ನು ತಿರಸ್ಕರಿಸಿದೆ.
ಬೆಂಗಳೂರಿನ ಪೊಲೀಸ್ ಆಯುಕ್ತರು 2012ರಲ್ಲಿ ಈ ವ್ಯಾಪಾರಿಗಳ ಎನ್‌ಒಸಿ ಹಿಂಪಡೆದಿದ್ದರು. ಕರ್ನಾಟಕ ಪೊಲೀಸ್ ಮಹಾನಿರ್ದೇಶಕರು 2013ರಲ್ಲಿ ಆಯುಕ್ತರ ಆದೇಶವನ್ನು ಎತ್ತಿ ಹಿಡಿದಿದ್ದರು. ವ್ಯಾಪಾರಿಗಳು ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್, “ನಿಸ್ಸಂದೇಹವಾಗಿ ಪಟಾಕಿಗಳ ದುಷ್ಪರಿಣಾಮಗಳು ಪರಿಸರಕ್ಕೆ ಸರಿಪಡಿಸಲಾಗದ ಹಾನಿಯನ್ನುಂಟು ಮಾಡುತ್ತವೆ. ಶಿಶುಗಳು, ಗರ್ಭಿಣಿಯರು, ತಾಯಂದಿರು ಮತ್ತು ರೋಗಿಗಳನ್ನು ಹೊರತುಪಡಿಸಿ (ಹೆಚ್ಚು ವಿಶೇಷವಾಗಿ ಹೃದಯ ಸಂಬಂಧಿ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವವರು) ಪ್ರಾಣಿಗಳು ಮತ್ತು ಪಕ್ಷಿಗಳು ಸಹ ಹಿಂಸೆಯನ್ನು ಅನುಭವಿಸುತ್ತವೆ” ಎಂದು ಅಭಿಪ್ರಾಯಪಟ್ಟಿದೆ.
ಬೆಂಗಳೂರಲ್ಲಿ ಪಟಾಕಿ ಮಾರುವಂತಿಲ್ಲ ಎಂಬ ನಿಯಮವು ಕೇವಲ ಅರ್ಜಿದಾರರಿಗೆ ಮಾತ್ರವಲ್ಲ, ಪ್ರತಿ ವ್ಯಾಪಾರಿಗೂ ಅನ್ವಯಿಸುತ್ತದೆ. ಪಟಾಕಿಗಳ ಮಾರಾಟವು ವಿಷ, ಮದ್ಯ, ತಂಬಾಕು ಮತ್ತು ಸ್ಫೋಟಕಗಳಂತಹ ಸರಕುಗಳ ವರ್ಗಕ್ಕೆ ಸೇರುತ್ತದೆ. ಆದ್ದರಿಂದ ಅದರ ವ್ಯಾಪಾರವನ್ನು ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸುವ ಮೂಲಭೂತ ಹಕ್ಕಿನ ಅಡಿಯಲ್ಲಿ ಒಳಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.