ಕುಂಬಳೆ: ಕಾಸರಗೋಡು ಜಿಲ್ಲೆಯಲ್ಲಿ ಬಿರುಸಿನ ಮಳೆ ಸುರಿಯುತ್ತಿದೆ. ಕೃಷಿಗೆ ಅಪಾರ ಹಾನಿ ಸಂಭವಿಸಿದೆ. ರಸ್ತೆಗಳಲ್ಲಿ ನೆರೆ ನೀರು ಹರಿದು ವಾಹನ ಮತ್ತು ಜನ ಸಂಚಾರಕ್ಕೆ ತೊಡಕಾಗಿದೆ.
ಭೀಮನಡಿ ಗ್ರಾಮದ ಕೂರನಗುಂದದಲ್ಲಿ ಕೃಷಿಕ ರವೀಂದ್ರನ್ ಅವರ ಪತ್ನಿ, ನಿವೃತ್ತ ಶಿಕ್ಷಕಿ ಲತಾ ಅವರು ತೋಟಕ್ಕೆ ಬಾಳೆ ಎಲೆ ತರಲು ಹೋಗಿದ್ದಾಗ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು.
ಅವರ ಮೃತದೇಹ ಪ್ಲಾಚಿಕರ ಮೀಸಲು ಅರಣ್ಯದ ತೋಡಿಗೆ ನಿರ್ಮಿಸಿದ ಅಣೆಕಟ್ಟಿನಲ್ಲಿ ಪತ್ತೆಯಾಗಿದೆ. ಮೃತರು ಪತಿ, ಪುತ್ರನನ್ನು ಅಗಲಿದ್ದಾರೆ. ಇವರು ಎರಡು ತಿಂಗಳ ಹಿಂದೆಯಷ್ಟೇ ನಿವೃತ್ತರಾಗಿದ್ದರು.
ಮಳೆ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲ ಶಾಲೆ ಮತ್ತು ಅಂಗನವಾಡಿಗಳಿಗೆ ಜಿಲ್ಲಾಧಿಕಾರಿ ರಜೆ ಸಾರಲಾಗಿತ್ತು. ಮಂಗಲ್ಪಾಡಿ ಪಂಚಾಯತ್‌ನ ಇಚ್ಲಂಗೋಡು ವಳಯಂ ರಸ್ತೆಯ ಹೊಳೆ ಭಾಗ ಕುಸಿದಿದೆ. ಇತ್ತೀಚೆಗಷ್ಟೇ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ರಸ್ತೆ ಇದಾಗಿದ್ದು, ಇನ್ನಷ್ಟು ಮಳೆ ಸುರಿದಲ್ಲಿ ಹೊಳೆ ಪಕ್ಕದ ರಸ್ತೆ ಕುಸಿಯಲಿದೆ ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.