ಉಡುಪಿ: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಅಮಾಯಕರು ಮೋಸದ ಬಲೆಗೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಉಡುಪಿಯಲ್ಲಿ ಕೂಡಾ ಅದೇ ರೀತಿಯ ಘಟನೆ ನಡೆದಿದ್ದು ವ್ಯಕ್ತಿಯೊಬ್ಬ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾನೆ.

ಮೂಲತಃ ಉಡುಪಿಯ ದಿಲೀಪ್ ಎಂಬವರು ಹಣ ಕಳೆದುಕೊಂಡವರಾಗಿದ್ದಾರೆ. ಇವರಿಗೆ ನೆಟ್ಫ್ಲಿಕ್ಸ್ ನ ಚಂದಾ ಮುಗಿದು ಹೋಗಿದ್ದ ಕಾರಣ ಇಮೇಲ್ ಗೆ ಒಂದು ಮೆಸೇಜ್ ಬಂದಿತ್ತು. ನಂತರ ಲಿಂಕ್ ಕ್ಲಿಕ್ ಮಾಡಿದಾಗ ಚಂದಾ ಪಡೆಯಲು ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆಯಲು ಇನ್ನೊಂದು ಟ್ಯಾಬ್ ಓಪನ್ ಆಗಿದೆ. ಅವರು ಕ್ರೆಡಿಟ್ ಕಾರ್ಡ್ ಸಂಖ್ಯೆ ನಮೂದಿಸಿದಾಗ ಮೊಬೈಲ್ ಗೆ ಒಟಿಪಿ ಬಂದಿದೆ. ಅದನ್ನು ಎಂಟರ್ ಮಾಡಿದ್ದಾರೆ. ಆದರೆ ಸಮ್ಥಿಂಗ್ ವೆಂಟ್ ರಾಂಗ್ ಎಂಬ ಮೆಸೇಜ್ ಬಂದಿದ್ದು ಆಗ ದಿಲೀಪ್ ಗೆ ಅನುಮಾನ ಬಂದಿದೆ.
ಆಗ ಅವರು ಬ್ಯಾಂಕ್ ನ ಹೆಲ್ಪ್ಪೈನ್ ಗೆ ಕಾಲ್ ಮಾಡಿದಾಗ ಅವರ ಖಾತೆಯಿಂದ ಲಕ್ಷಕ್ಕೂ ಅಧಿಕ ಹಣ ಮಂಗಮಾಯವಾಗಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.