ಕಾಸರಗೋಡು: ಪೊಲೀಸರಿಗೆ ದೂರು ನೀಡಿದ ದ್ವೇಷದಿಂದ ದುಷ್ಕರ್ಮಿಯೋರ್ವ ಯುವತಿಗೆ ಬೆಂಕಿ ಹಚ್ಚಿದ್ದ, ಪರಿಣಾಮ ಗಂಭೀರ ಸುಟ್ಟ ಗಾಯಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮೃತಪಟ್ಟ ಘಟನೆ ಬೇಡಡ್ಕದಲ್ಲಿ ನಡೆದಿದೆ.

ಬೇಡಡ್ಕದ ರಮಿತಾ (22) ಮೃತಪಟ್ಟ ಯುವತಿ. ಬೇಡಡ್ಕ ಮನ್ನಡ್ಕ ಎಂಬಲ್ಲಿ ಅವರು ಅಂಗಡಿ ನಡೆಸುತ್ತಿದ್ದರು.ಏಪ್ರಿಲ್ 8 ರಂದು ಈ ಘಟನೆ ನಡೆದಿತ್ತು. ಸಮೀಪದ ಪೀಠೋಪಕರಣ ಮಳಿಗೆ ಮಾಲಕ ತಮಿಳುನಾಡು ಮೂಲದ ರಾಮಕೃತ (57) ಎಂಬಾತ ಈ ಕೃತ್ಯ ಎಸಗಿದ್ದನು.ಪಾನಮತ್ತನಾಗಿ ಕಿರುಕುಳ ನೀಡಿದ ಬಗ್ಗೆ ರಮಿತಾ ಪೊಲೀಸರಿಗೆ ದೂರು ನೀಡಿದ್ದು, ಇದರಿಂದ ಈತ ಆಕೆಯ ದಿನಸಿ ಅಂಗಡಿಯೊಳಗೆ ನುಗ್ಗಿ ಟಿನ್ನರ್ ಸುರಿದು ಬೆಂಕಿ ಹಚ್ಚಿದ್ದ. ಪರಿಣಾಮ ಯುವತಿ ಗಂಭೀರ ಸುಟ್ಟ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರಮಿತಾ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ದಿನಂಪ್ರತಿ ರಾಮಕೃತ ಪಾನಮತ್ತನಾಗಿ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ರಮಿತಾ ಬೇಡಡ್ಕ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡಿದ ವೈಷಮ್ಯದಿಂದ ಏ. 8 ರ ಸಂಜೆ 3 ಗಂಟೆಗೆ ರಮಿತಾ ಅಂಗಡಿಯೊಳಗೆ ನುಗ್ಗಿದ ಈತ ಆಕೆಯ ದೇಹಕ್ಕೆ ಟಿನ್ನರ್ ಸುರಿದು ಬೆಂಕಿ ಹಚ್ಚಿದ್ದನು. ಆ ಬಳಿಕ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ನಾಗರಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದರು.