ಮಂಗಳೂರು : ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮೂರು ಮಂದಿ ಪಾಕಿಸ್ಥಾನಿ ಮಹಿಳೆಯರು ವಾಸ್ತವ್ಯವಿರುವುದು ಪೊಲೀಸ್ ಪರಿಶೀಲನೆ ವೇಳೆ ಪತ್ತೆಯಾಗಿದೆ. ಆದರೆ ಇವರು 12-13 ವರ್ಷಗಳ ಹಿಂದೆಯೇ ಮಂಗಳೂರಿಗೆ ಬಂದು ವಾಸ್ತವ್ಯ ಹೂಡಿ ಭಾರತೀಯ ಪ್ರಜೆಗಳನ್ನು ಮದುವೆಯಾಗಿದ್ದಾರೆ.

ಈ ಪೈಕಿ ಒಬ್ಬರು ನಗರದ ಫಳ್ನೀರ್, ಇನ್ನೊಬ್ಬರು ವಾಮಂಜೂರಿನಲ್ಲಿ ನೆಲೆಸಿದ್ದಾರೆ. ಇನ್ನೊಬ್ಬ ಮಹಿಳೆಯ ವಾಸಸ್ಥಳದ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಈಗಾಗಲೇ ರಾಜ್ಯ ಸರಕಾರಕ್ಕೆ ಮಾಹಿತಿ ರವಾನೆ ಮಾಡಲಾಗಿದೆ. ಸರಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಸದ್ಯ ಯಾವುದೇ ಪಾಕಿಸ್ಥಾನಿ ನಾಗರಿಕರು ಪತ್ತೆಯಾಗಿಲ್ಲ ಎಂದು ಎಸ್ಪಿ ತಿಳಿಸಿದ್ದಾರೆ. ಇನ್ನು ಉಡುಪಿ ಜಿಲ್ಲೆಯಲ್ಲಿ ಯಾವುದೇ ಪಾಕಿಸ್ತಾನಿ ಪ್ರಜೆಗಳು ಪತ್ತೆಯಾಗಿಲ್ಲ ಎಂದು ಉಡುಪಿ ಎಸ್ಪಿ ಮಾಹಿತಿ ನೀಡಿದ್ದಾರೆ.
ಎಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ 26 ಮಂದಿ ಸಾವಿಗೆ ಕಾರಣರಾಗಿದ್ದರು. ಈ ಹಿನ್ನಲೆ ಕೇಂದ್ರ ಸರಕಾರ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ನಿರ್ಬಂಧಗಳನ್ನು ಹೇರಿದ್ದು, ದೇಶದಲ್ಲಿ ಇರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳು ದೇಶ ತೊರೆಯುವಂತೆ 48 ಗಂಟೆಗಳ ಗಡುವನ್ನು ನೀಡಿತ್ತು.
ಅಲ್ಲದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲಾ ರಾಜ್ಯಗಳ ಸಿಎಂ ಗಳಿಗೆ ರಾಜ್ಯದಲ್ಲಿ ಯಾವುದೇ ಪಾಕಿಸ್ತಾನದ ಪ್ರಜೆಗಳು ಉಳಿಯದಂತೆ ನೋಡಿಕೊಳ್ಳಲು ಆದೇಶ ಹೊರಡಿಸಿದ್ದಾರೆ. ಈ ಮೂಲಕ, ದೇಶದಲ್ಲಿರುವ ಪಾಕಿಸ್ತಾನೀಯರನ್ನು ಹೊರಕ್ಕೆ ಹಾಕಲು ಭಾರತ ತೀವ್ರ ತೆರನಾಗಿ ಪ್ರಯತ್ನಿಸುತ್ತಿದೆ.