ಮಂಗಳೂರು: ಮಂಗಳೂರು ನಗರದ ಬಜ್ಪೆ ಬಳಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಬಜ್ಪೆ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ರಶೀದ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ರಶೀದ್ ಅವರು ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇಬ್ಬರು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಹಿಂದೂ ಜಾಗರಣ ವೇದಿಕೆಯು ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಹೆಡ್ ಕಾನ್‌ಸ್ಟೆಬಲ್ ರಶೀದ್ ಪರೋಕ್ಷವಾಗಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿತ್ತು. ಈ ಆರೋಪದ ಬೆನ್ನಲ್ಲೇ, ಹಿಂದೂ ಮುಖಂಡ ಮೂಡಬಿದ್ರೆಯ ಸಮಿತ್ ರಾಜ್ ದರೆಗುಡ್ಡೆ ಮತ್ತು ಹಿಂದೂ ಜಾಗರಣ ವೇದಿಕೆ ಮುಖಂಡ ಕೆ.ಟಿ. ಉಲ್ಲಾಸ್ ಎಂಬುವರು ಯಾವುದೇ ಆಧಾರವಿಲ್ಲದೆ ತಮ್ಮ ಹೆಸರನ್ನು ಈ ಪ್ರಕರಣದಲ್ಲಿ ತಳುಕು ಹಾಕಿ ಅವಹೇಳನಕಾರಿ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ರಶೀದ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಇದರಿಂದ ತಮ್ಮ ತೇಜೋವಧೆಯಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ಬಜ್ಪೆ ಪೊಲೀಸರು ಸಮಿತ್ ರಾಜ್ ದರೆಗುಡ್ಡೆ ಮತ್ತು ಕೆ.ಟಿ. ಉಲ್ಲಾಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.