ಮಂಗಳೂರು: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದು, ಈವರೆಗೆ ಬಂಧಿತರ ಸಂಖ್ಯೆ 10ಕ್ಕೇರಿದೆ.
ಶಿಯಾಬುದ್ದೀನ್ ಅಲಿ(33), ಎಲಿಮಲೆಯ ಬಶೀರ್(29) ಮತ್ತು ರಿಯಾಜ್(27) ಬಂಧಿತ ಆರೋಪಿಗಳು.
15 ದಿನಗಳಿಂದ ಪದೇಪದೆ ಜಾಗ ಬದಲಿಸುತ್ತಾ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ತಲಪಾಡಿ ಚೆಕ್ ಪೋಸ್ಟ್ನಲ್ಲಿ ಗುರುವಾರ ಬೆಳಗ್ಗೆ ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ವಾಹನ ಹಾಗೂ ಆಯುಧಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ವಿವರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲೋಕ್ ಕುಮಾರ್, ಪ್ರಕರಣಗಳಲ್ಲಿ ಸಂಚು ರೂಪಿಸಿದ ಹಾಗೂ ಸಹಕಾರ ನೀಡಿದ ಒಟ್ಟು 7 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಮುಖ ಆರೋಪಿಗಳ ಬಂಧನ ಸೇರಿದಂತೆ ಒಟ್ಟು ಹತ್ತು ಮಂದಿಯ ಬಂಧನವಾಗಿದೆ. ಇನ್ನೂ ತನಿಖೆ ಮುಂದುವರಿದಿದ್ದು ಹತ್ಯೆಗೆ ಹಾಗೂ ಆರೋಪಿಗಳ ರಕ್ಷಣೆಗೆ ಸಹಕಾರ ನೀಡಿದವರ ಬಂಧನವಾಗಲಿದೆ ಎಂದಿದ್ದಾರೆ.
ಪ್ರವೀಣ್ ಕೊಲೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳು ಪದೇಪದೆ ತಮ್ಮ ವಾಸ ಸ್ಥಾನ ಬದಲಿಸುತ್ತಿದ್ದರು. ವಿಶೇಷ ತಂಡ ರಚಿಸಿ ಅವರನ್ನು ಬಂಧಿಸಲಾಗಿದೆ. ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಕೃತ್ಯಕ್ಕೆ ಬಳಸಿದ ವಸ್ತುಗಳನ್ನ ವಶಕ್ಕೆ ಪಡೆದ ಬಳಿಕ ತನಿಖೆಯನ್ನು ಎನ್ಐಎಗೆ ಹಸ್ತಾಂತರಿಸಲಾಗುವುದು ಎಂದು ವಿವರಿಸಿದ್ದಾರೆ.