ಉಳ್ಳಾಲ: ಸಂಚಾರಿ ಠಾಣಾ ಎಎಸ್ ಐ ಸಿಟಿ ಬಸ್ ನಿರ್ವಾಹಕನಿಗೆ ಹಲ್ಲೆ ನಡೆಸಿರುವ ಘಟನೆ ತಲಪಾಡಿಯಲ್ಲಿ ಇಂದು ಬೆಳಿಗ್ಗೆ ನಡೆದಿದ್ದು, ಕೃತ್ಯ ಖಂಡಿಸಿ ಬಸ್ ಸಿಬ್ಬಂದಿ ತಲಪಾಡಿ- ಸ್ಟೇಟ್ ಬ್ಯಾಂಕ್ ಚಲಿಸುವ ಬಸ್ ಬಂದ್ ನಡೆಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಉಷಾ ಹೆಸರಿನ ಸಿಟಿ ಬಸ್ ನಿರ್ವಾಹಕ ರಾಜು ಎಂಬಾತನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಜೆಪ್ಪು ಸಂಚಾರಿ ಠಾಣೆಯ ಎಎಸ್‌ಐ ಆಲ್ಬರ್ಟ್ ಲಸ್ರಾದೊ ಇಂದು ಬೆಳಿಗ್ಗೆ ತಲಪಾಡಿ ಬಳಿ ಸಿಟಿ ಬಸ್ಸುಗಳ ವಿರುದ್ಧ ಕೇಸುಗಳನ್ನು ಹಾಕುತ್ತಿದ್ದರು. ಈ ನಡುವೆ ನಿರ್ವಾಹಕನೋರ್ವನಿಗೆ ಹಲ್ಲೆ ನಡೆಸಿದ್ದಾರೆ. ಕೃತ್ಯ ಖಂಡಿಸಿದ ಬಸ್ ಸಿಬ್ಬಂದಿ ಬೆಳಗ್ಗಿನಿಂದ ಮಧ್ಯಾಹ್ನವರೆಗೂ ಬಸ್ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.ಕೆಲ ತಿಂಗಳುಗಳ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದ ಎಎಸ್‌ಐ ಆಲ್ಬರ್ಟ್ ಲಸ್ರಾದೋ ತೊಕ್ಕೊಟ್ಟು ಫ್ಲೈಓವರಿನಡಿ ಕಾರೊಂದರಲ್ಲಿ ಸ್ಟಿಕರ್ ಇರುವುದರ ವಿರುದ್ಧ ದಂಡ ಹಾಕಿದ್ದರು. ಆದರೆ ಕಾರಿನಲ್ಲಿ ಸ್ವಾಮಿ ಕೊರಗಜ್ಜ ಸ್ಟಿಕರ್ ಇದ್ದು, ಇದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಕಾರು ಮಾಲೀಕ ಸೇರಿದಂತೆ ಹಿಂದು ಸಂಘಟನೆ ಕಾರ್ಯಕರ್ತರು ತೊಕ್ಕೊಟ್ಟು ಜಂಕ್ಷನ್ನಿನಲ್ಲೇ ಪ್ರತಿಭಟನೆ ನಡೆಸಿ ಎಎಸ್‌ಐ ವಜಾಗೊಳಿಸಲು ಆಗ್ರಹಿಸಿದ್ದರು.