ಉಡುಪಿ: ಶುಕ್ರವಾರದಿಂದ ಮೊದಲ್ಗೊಂಡ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮುಗಿಲು ಮುಟ್ಟಿದೆ. ನಿನ್ನೆ (ಶನಿವಾರ) ನಡೆದ ವಿಟ್ಲಪಿಂಡಿ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಭಕ್ತಿಸಾಗರದಲ್ಲಿ ಮಿಂದೆದ್ದರು. ಪರ್ಯಾಯ ಮಠಾಧೀಶರಾದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಶ್ರೀಕೃಷ್ಣನಿಗೆ ಯಶೋಧೆ ಅಲಂಕಾರ ಮಾಡಿ ವಿಶೇಷ ಪೂಜೆ ನಡೆಸಿದರೆ, ಸಾವಿರಾರು ಭಕ್ತರು ಕೃಷ್ಣನ ದರ್ಶನ ಮಾಡಿ ಕೃತಾರ್ಥರಾದರು.
ಶನಿವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಕೃಷ್ಣಮಠದ ರಥಬೀದಿಗೆ ಭಕ್ತರ ದಂಡೇ ಹರಿದುಬಂತು. ರಥಬೀದಿಯಲ್ಲಿ ಹುಲಿ ಕುಣಿತ ಪ್ರದರ್ಶನ ನಡೆಯಿತು. ವಿವಿಧ ವೇಷಧಾರಿಗಳು ನೆರೆದ ಭಕ್ತರನ್ನು ರಂಜಿಸಿದರು.
ರಥಬೀದಿಯಲ್ಲಿ ಸಾಂಪ್ರದಾಯಿಕ ಮೊಸರು ಕುಡಿಕೆ ಒಡೆಯುವ ಆಚರಣೆ ನಡೆಯಿತು. ಮಧ್ಯಾಹ್ನ ಮೂರೂವರೆ ಸುಮಾರಿಗೆ ಗೊಲ್ಲರು ಕೃಷ್ಣಮಠದ ಮುಂಭಾಗ ಮೊಸರು ಕುಡಿಕೆಗಳನ್ನು ಒಡೆಯುವುದರೊಂದಿಗೆ ವಿಟ್ಲಪಿಂಡಿಗೆ ಚಾಲನೆ ದೊರೆಯಿತು. ಬಳಿಕ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ವೈಭವದ ಶೋಭಾಯಾತ್ರೆ ನಡೆಸಲಾಯಿತು.
ಕೊರೊನಾ ಮಹಾಮಾರಿ ಕಾರಣದಿಂದಾಗಿ ಕಳೆದ ಎರಡು ವರ್ಷ ಸರಳವಾಗಿ ಅಷ್ಟಮಿ ಆಚರಣೆ ನಡೆದಿತ್ತು. ಈ ಬಾರಿ ನಡೆದ ಉತ್ಸವದಲ್ಲಿ ಹೊರ ಜಿಲ್ಲೆ ಮತ್ತು ಹೊರರಾಜ್ಯಗಳ ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು.