ಜಯಪುರ: ಟೀ ಪ್ಲಾಂಟೇಷನ್ ಸೇರಿ ಕಾಡಂಚಿನ ನಿವಾಸಿಗಳಿಗೆ ಕಾಟ ಕೊಡುತ್ತಿದ್ದ ಗಂಡಾನೆಯನ್ನು ಹೆಣ್ಣಾನೆ ಮೂಲಕ ಹನಿಟ್ರ್ಯಾಪ್ ಮಾಡಿಸಿದ್ರೂ ಒಂದು ರಾತ್ರಿ ಕಳೆದು ಎಸ್ಕೇಪ್ ಆಗಿದೆ.
ಮೇಗುಂದಾ ಹೋಬಳಿ ಹೇರೂರು ಗ್ರಾಮ ಪಂಚಾಯಿತಿ ಎಲೆಮಡಿಲು ಬಳಿಯ ಬಾಲನೂರ್ ಟೀ ಪ್ಲಾಂಟೇಷನ್ನಲ್ಲಿ ಹಾವೇರಿ ಟಸ್ಕರ್ ಕಾಡಾನೆ ಸೆರೆ ಹಿಡಿಯುವ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಟೀ ಎಸ್ಟೇಟ್ನ ಮುತ್ತು ಮಾರಿಯಮ್ಮ ದೇವಾಲಯದ ಬಳಿ ಹೆಣ್ಣಾನೆ ಭಾನುಮತಿಯನ್ನು ಭಾನುವಾರ ರಾತ್ರಿಯೇ ಬಿಡಲಾಗಿತ್ತು. ರಾತ್ರಿ ಬಂದ ಕಾಡಾನೆ ಹಾವೇರಿ ಟಸ್ಕರ್ ಸೋಮವಾರ ಬೆಳಗ್ಗೆ 7.30ರ ವರೆಗೆ ಭಾನುಮತಿಯೊಂದಿಗೆ ಕಾಲ ಕಳೆದಿತ್ತು. ಬೆಳಗಾಗುತ್ತಿದ್ದಂತೆ ಕಾಡಾನೆ ಅಲ್ಲಿಂದ ಎಲೆಮಡಿಲು ಗುಡ್ಡಕ್ಕೆ ಕಾಲ್ಕಿತ್ತಿದೆ. ಸೋಮವಾರ ರಾತ್ರಿ ಮತ್ತೆ ಭಾನುಮತಿಯನ್ನು ದೇವಸ್ಥಾನದ ಬಳಿ ಬಿಡಲಾಯಿತಾದರೂ ಕಾಡಾನೆ ಹಾವೇರಿ ಟಸ್ಕರ್ ಭಾನುಮತಿ ಹೆಣ್ಣಾನೆಯ ಬಳಿ ಬಾರದೆ ದೂರದಿಂದಲೇ ಗಮನಿಸಿ ವಾಪಸ್ ತೆರಳಿದೆ ಎಂದು ತಿಳಿದುಬಂದಿದೆ. ಸದ್ಯ ಅರಣ್ಯ ಅಧಿಕಾರಿಗಳು ಬೇರೊಂದು ಸ್ಥಳದಲ್ಲಿ ಭಾನುಮತಿಯನ್ನು ಬಿಡಲಾಗಿದ್ದು ಹಾವೇರಿ ಟಸ್ಕರ್ನನ್ನು ಹನಿಟ್ರ್ಯಾಪ್ಗೆ ಬೀಳಿಸಲು ಕಾದಿದ್ದಾರೆ. ಹೆಣ್ಣಾನೆ ಕಟ್ಟಿರುವ ಪ್ರದೇಶದಿಂದ 900 ಮೀಟರ್ ದೂರದಲ್ಲಿ ಕಾಡಾನೆಯ ಜಿಪಿಎಸ್ ಲೊಕೇಷನ್ ಕಾಣಿಸುತ್ತಿದ್ದು, ಇನ್ನೆರಡು ದಿನಗಳಲ್ಲಿ ಕಾಡಾನೆಯನ್ನು ಸೆರೆ ಹಿಡಿಯುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಶಾಸಕ ಟಿ.ಡಿ.ರಾಜೇಗೌಡ ಭೇಟಿ ನೀಡಿ ಆನೆ ಸೆರೆಗೆ ಸರಿಯಾದ ಯೋಜನೆ ರೂಪಿಸಿ ಆದಷ್ಟು ಬೇಗ ಕಾಡನೆ ಸೆರೆಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.