ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ಸೆ. 9ರಂದು ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿದೆ. ಇನ್ನು ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಲಿದೆ ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.
ಕಳೆದ ಮಾರ್ಚ್ 2ರಂದು ನಡೆಯಬೇಕಾಗಿದ್ದ ಚುನಾವಣೆಯು ಸುಪ್ರೀಂ ಕೋರ್ಟ್ ಆದೇಶವೊಂದರ ಗೊಂದಲದಿಂದ ಮುಂದೂಡಿಕೆಯಾಗಿತ್ತು. ಹೀಗಾಗಿ ಒಂದು ವರ್ಷ ಅವಧಿ ಪೂರ್ಣಗೊಳಿಸಿದ್ದ ಪ್ರೇಮಾನಂದ ಶೆಟ್ಟಿ ಅವರೇ ಮೇಯರ್ ಸ್ಥಾನದಲ್ಲಿ ಹಾಗೂ ಸುಮಂಗಳಾ ರಾವ್ ಉಪಮೇಯರ್ ಸ್ಥಾನದಲ್ಲಿ ಮುಂದುವರಿದಿದ್ದರು. ಹಾಲಿ ಮೇಯರ್ ಅವಧಿ ಮುಂದುವರಿದಿರುವ ಕಾರಣ ಹಾಲಿ ಬಿಜೆಪಿ ಆಡಳಿತದ ಕೊನೆಯ ಮೇಯರ್ ಅವರ ಅಧಿಕಾರವಧಿ ಅಷ್ಟು ದಿನ ಕಡಿತವಾಗಲಿದೆ. 23ನೇ ಅವಧಿಗೆ ಮೇಯರ್ ಸ್ಥಾನಕ್ಕೆ ಸಾಮಾನ್ಯ, ಉಪ ಮೇಯರ್ ಸ್ಥಾನಕ್ಕೆ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾತಿ ನಿಗದಿಯಾಗಿತ್ತು. ಈ ನಡುವೆ ಆಗಸ್ಟ್ 24ರಂದು ಪಾಲಿಕೆಯ 24ನೇ ಅವಧಿಯ ಮೀಸಲಾತಿ ಪ್ರಕಟಗೊಂಡಿದೆ. ಮೇಯರ್ ಸ್ಥಾನ ಸಾಮಾನ್ಯ, ಉಪಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ನಿಗದಿಯಾಗಿದೆ. ಮಹಾನಗರ ಪಾಲಿಕೆಯ ಒಟ್ಟು 60 ಸ್ಥಾನಗಳಲ್ಲಿ ಬಿಜೆಪಿ 44, ಕಾಂಗ್ರೆಸ್ 14 ಹಾಗೂ ಎಸ್‌ಡಿಪಿಐ ಎರಡು ಸ್ಥಾನಗಳನ್ನು ಹೊಂದಿವೆ.