ಮಂಗಳೂರು: ಪ್ರಧಾನಿ ಮೋದಿ ಅವರ ಆಗಮನದ ಹಿನ್ನೆಲೆ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಸೆ.2ರಂದು ನಡೆಯುವ ಕಾರ್ಯಕ್ರಮದ ಹಿನ್ನೆಲೆ ಮುಂಜಾಗರೂಕತೆಯ ಕ್ರಮವಾಗಿ ಬಂಗ್ರ ಕೂಳೂರಿನ ಗುರುದ್ವಾರದಲ್ಲಿ ಟೆಂಟ್ ಹಾಕಿ ವಾಸಿಸುತ್ತಿದ್ದ ಅಲೆಮಾರಿಗಳನ್ನು ಪೊಲೀಸರು ಬೆದರಿಸಿ ತೆರಳುವಂತೆ ಸೂಚಿಸಿದ್ದು ಅಲೆಮಾರಿಗಳನ್ನು ಬೀದಿಪಾಲು ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು.
ಪೊಲೀಸರು ಬಂಗ್ರಕೂಳೂರು ಪ್ರದೇಶಕ್ಕೆ ತೆರಳಿ ಅಲ್ಲಿ ಟೆಂಟ್ ಹಾಕಿ ಬದುಕು ಸಾಗಿಸುತ್ತಿದ್ದ 9 ಕುಟುಂಬಗಳನ್ನು ತೆರವುಗೊಳಿಸಿದ್ದು ಇದರಿಂದ ಸುಮಾರು 30ಕ್ಕೂ ಅಧಿಕ ಮಂದಿ ಬೀದಿಪಾಲಾಗಿದ್ದಾರೆ ಎಂದು ವರದಿಯಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಭದ್ರತೆ ದೃಷ್ಠಿಯಿಂದ ಕೂಳೂರಿನಲ್ಲಿ ವಾಸವಿದ್ದ ಕುಟುಂಬಕ್ಕೆ ತಾತ್ಕಾಲಿಕ ವ್ಯವಸ್ಥೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಭದ್ರತೆ ಮತ್ತು ಪಾರ್ಕಿಂಗ್ ಮತ್ತು ಇತರ ಕಾರ್ಯಕ್ರಮ ಸಂಬಂಧಿತ ಅವಶ್ಯಕತೆಗಳಿಗಾಗಿ ಲಭ್ಯವಿರುವ ಪ್ರತಿಯೊಂದು ಸ್ಥಳವನ್ನು ಬಳಸಿಕೊಳ್ಳಲು ಪೊಲೀಸರು ಅವರನ್ನು ಸ್ಥಳಾಂತರಿಸಲು ಕೇಳಿಕೊಂಡಿದ್ದಾರೆ. ತಾತ್ಕಾಲಿಕ ವಸತಿಗಾಗಿ ಅವರಿಗೆ ಹತ್ತಿರದ ಸ್ಥಳಗಳನ್ನು ಒದಗಿಸಲಾಗುವುದು ಎಂದಿದ್ದಾರೆ.