ಮಂಗಳೂರು: ಪ್ರಧಾನಿ ಮೋದಿಯವರು ಸೆ.2ರಂದು ಮಂಗಳೂರಿನಲ್ಲಿ ಎನ್ಎಂಪಿಎ, ಎಂಆರ್ ಪಿಎಲ್ ನ 6 ವಿವಿಧ ಬಹುಕೋಟಿ ವೆಚ್ಚದ ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ಮಂಗಳೂರಿನಲ್ಲಿಂದು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ಮಾತನಾಡಿರುವ ಅವರು, ಕೊಚ್ಚಿನ್ ನಿಂದ ಆಗಮಿಸುವ ಪ್ರಧಾನಿಯವರು ಎನ್ಎಂಪಿಎಗೆ ತೆರಳಲಿದ್ದಾರೆ. ಅಲ್ಲಿಂದ ನಗರದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಮೈದಾನದ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಂದ್ರ, ರಾಜ್ಯ ಸರಕಾರದ ವಿವಿಧ ಫಲಾನುಭವಿಗಳಿಗೆ ಯೋಜನೆಗಳನ್ನು ಹಸ್ತಾಂತರಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಯಶಸ್ಸಿಗೆ ದ.ಕ.ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿದ್ದು, ಕಾರ್ಯಕ್ರಮದಲ್ಲಿ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಹಿತ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 1ಕ್ಕೆ ಕಾರ್ಯಕ್ರಮ ನಡೆಯಲಿರುವುದರಿಂದ ಸಾರ್ವಜನಿಕರು ಮುಂಚಿತವಾಗಿ ಬಂದು ನೂಕುನುಗ್ಗಲು, ಗೊಂದಲ ಆಗದಂತೆ ಸಹಕರಿಸಬೇಕು. ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದರು.
ಕಾರ್ಯಕ್ರಮ ನಡೆಯುತ್ತಿರುವ ಮೈದಾನದ ಅಕ್ಕಪಕ್ಕದಲ್ಲಿನ ತೊಂದರೆ ಇಲ್ಲದ ಯಾವುದೇ ಅಂಗಡಿ – ಮುಂಗಟ್ಟುಗಳನ್ನು ಮುಚ್ಚಲಾಗುತ್ತಿಲ್ಲ. ಸುರಕ್ಷತೆ ಹಾಗೂ ಆಯೋಜನೆಗೆ ಸಂಬಂಧಿಸಿದಂತೆ ಮುನ್ನೆಚ್ಚರಿಕಾ ದೃಷ್ಟಿಯಿಂದ ಕೆಲವೊಂದು ಆಯ್ದ ಅಂಗಡಿಗಳನ್ನು ಮಾತ್ರ ಮುಚ್ಚುವಂತೆ ಮನವಿ ಮಾಡಿದ್ದೇವೆ. ಫಲಾನುಭವಿಗಳನ್ನು ಕಡ್ಡಾಯವಾಗಿ ಬರಬೇಕೆಂದು ಯಾವುದೇ ಒತ್ತಡ ಹೇರಿಲ್ಲ. ಎಲ್ಲರಿಗೂ ಆಮಂತ್ರಣ ಪತ್ರಿಕೆ ಕಳುಹಿಸಲಾಗಿದೆ. ಇಚ್ಛೆ ಉಳ್ಳವರು ಮಾತ್ರ ಆಗಮಿಸಬಹುದು ಎಂದು ದ.ಕ.ಜಿಲ್ಲಾಧಿಕಾರಿ ರಾಜೇಂದ್ರ ಕೆ ವಿ ಹೇಳಿದರು.