ಬೆಳ್ತಂಗಡಿ: ನೇತ್ರಾವತಿ ಸ್ನಾನಘಟ್ಟದ ಸಮೀಪ ಶನಿವಾರ ಸಂಜೆ ವ್ಯಕ್ತಿಯೊಬ್ಬರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಘಟನೆಯ ತಕ್ಷಣ ಸ್ಥಳೀಯರು ಧೈರ್ಯದಿಂದ ಮುನ್ನಡೆದು ಬೆಂಕಿಯನ್ನು ನಂದಿಸಿ, ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಧಾವಿಸಿದ ಧರ್ಮಸ್ಥಳ ಪೊಲೀಸರು ಗಾಯಾಳುವನ್ನು ವಿಚಾರಣೆ ನಡೆಸಿದಾಗ, ಆತನು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಚ್ಚಿಗಟ್ಟ ಗ್ರಾಮದ ನಿವಾಸಿ ನರೇಂದ್ರ (50) ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡಲು ಉದ್ದೇಶಪೂರ್ವಕವಾಗಿ ಪೆಟ್ರೋಲ್ ತೆಗೆದುಕೊಂಡು ಧರ್ಮಸ್ಥಳದ ನೇತ್ರಾವತಿ ತೀರಕ್ಕೆ ಬಂದು ಈ ಕೃತ್ಯಕ್ಕೆ ಮುಂದಾಗಿರುವುದಾಗಿ ಆತ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ನರೇಂದ್ರ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಆಗಮಿಸಿದ ಬಳಿಕ ಆತ್ಮಹತ್ಯೆ ಯತ್ನದ ನಿಖರ ಕಾರಣ ತಿಳಿದುಬರುವ ಸಾಧ್ಯತೆ ಇದೆ.ಪ್ರಕರಣದ ಸಂಬಂಧ ಧರ್ಮಸ್ಥಳ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ




