ಮಂಗಳೂರು : ನಗರದ ಪಡೀಲ್ ರೈಲ್ವೇ ಅಂಡರ್ ಪಾಸ್ ಬಳಿ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಎಂಡಿಎಂಎ (MDMA) ಮಾದಕ ವಸ್ತುವನ್ನು ಮಾರಾಟ ಮಾಡಲು ಸಂಚು ರೂಪಿಸಿದ್ದ ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮೊಹಮ್ಮದ್ ಗುಲ್ ಝಹೀಮ್ ಎಂದು ಗುರುತಿಸಲಾಗಿದೆ. ಈತನ ಶೋಧನೆ ನಡೆಸಿದಾಗ ಪ್ಯಾಂಟ್ ಜೇಬಿನಲ್ಲಿ 25.23 ಗ್ರಾಂ ಹಾಗೂ ಸ್ಕೂಟರ್‌ನಲ್ಲಿ 40.55 ಗ್ರಾಂ ಸೇರಿದಂತೆ ಒಟ್ಟು 65.78 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಇದರ ಮೌಲ್ಯ ಸುಮಾರು ₹6,57,800 ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಒಂದು ವಿವೋ ಮೊಬೈಲ್, ಡಿಜಿಟಲ್ ತೂಕ ಮಾಪನ ಮತ್ತು ಜಿಪ್ ಲಾಕ್ ಕವರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಂಕನಾಡಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಶಿವಕುಮಾರ್ ಮತ್ತು ತಂಡ ಏಪ್ರಿಲ್ 24ರಂದು ಗಸ್ತಿನಲ್ಲಿದ್ದಾಗ, ಪಡೀಲ್‌ನ ಪೇರ್ಲ ರಸ್ತೆಯಲ್ಲಿ ಕಪ್ಪು ಬಣ್ಣದ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಪೊಲೀಸ್ ವಾಹನವನ್ನು ಕಂಡು ಓಡಿ ಹೋಗಲು ಯತ್ನಿಸಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆತನನ್ನು ಬೆನ್ನಟ್ಟಿ ವಶಕ್ಕೆ ಪಡೆದಿದ್ದಾರೆ.
ಆರೋಪಿ ಈ ಮಾದಕ ವಸ್ತುವನ್ನು ಬೆಂಗಳೂರಿನ ಅಪರಿಚಿತ ವ್ಯಕ್ತಿಯಿಂದ ಖರೀದಿಸಿ ಮಂಗಳೂರಿನಲ್ಲಿ ಮಾರಾಟ ಮಾಡಲು ತಂದಿದ್ದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ. ಒಟ್ಟು ₹8,08,100 ಮೌಲ್ಯದ ಸ್ವತ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




