ಬೆಂಗಳೂರು: ಹೊರರಾಜ್ಯದ ವಿದ್ಯಾರ್ಥಿಗಳ ನಡುವಿನ ಕ್ಷುಲ್ಲಕ ಗಲಾಟೆ ದರೋಡೆ ಮತ್ತು ಕೊಲೆ ಯತ್ನದಂತಹ ಗಂಭೀರ ಅಪರಾಧಕ್ಕೆ ತಿರುಗಿದೆ. ಕಾಲೇಜಿನ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ದರೋಡೆ ಮಾಡಿದ್ದ ತಮಿಳುನಾಡು ಮೂಲದ ಆರು ಮಂದಿ ವಿದ್ಯಾರ್ಥಿಗಳನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.
ನಗರದ ಖಾಸಗಿ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಪದವಿ ವ್ಯಾಸಂಗ ಮಾಡುತ್ತಿರುವ ಕೇರಳ ಮೂಲದ ಇರ್ಫಾನ್ ಮೊಹಮ್ಮದ್ ಮತ್ತು ಅವರ ಸ್ನೇಹಿತರು ಕೋಣನಕುಂಟೆಯ ಪವಮಾನ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಏಪ್ರಿಲ್ 17ರ ರಾತ್ರಿ ಇರ್ಫಾನ್, ಆದರ್ಶ್ ಮತ್ತು ಡಾರ್ವಿನ್ ಮನೆಯಲ್ಲಿದ್ದಾಗ, ರಾತ್ರಿ ಸುಮಾರು 10:25ಕ್ಕೆ ಹಿಂಬಾಗಿಲಿನ ಮೂಲಕ ಒಳನುಗ್ಗಿದ ಆರು ಮಂದಿಯ ತಂಡ ಚಾಕು ತೋರಿಸಿ ಬೆದರಿಸಿದೆ. ಹಣ ನೀಡಲು ನಿರಾಕರಿಸಿದಾಗ ಮನಬಂದಂತೆ ಹಲ್ಲೆ ನಡೆಸಿ, ನಾಲ್ಕು ಮೊಬೈಲ್ ಫೋನ್, ಒಂದು ದ್ವಿಚಕ್ರ ವಾಹನ ಹಾಗೂ ಯುಪಿಐ ಮೂಲಕ ಬಲವಂತವಾಗಿ ಹಣವನ್ನು ವರ್ಗಾಯಿಸಿಕೊಂಡು ಪರಾರಿಯಾಗಿದ್ದರು.
ತನಿಖೆಯ ವೇಳೆ ಬಯಲಾದ ಸ್ಫೋಟಕ ಸತ್ಯದ ಪ್ರಕಾರ, ದೂರುದಾರ ಇರ್ಫಾನ್ ಮತ್ತು ಆರೋಪಿ ಅಭಿನೇಶ್ ಒಂದೇ ಕಾಲೇಜಿನವರು. ಈ ಹಿಂದೆ ಕಾಲೇಜಿನಲ್ಲಿ ನಡೆದ ಸಣ್ಣ ಗಲಾಟೆಯಲ್ಲಿ ಕೇರಳ ವಿದ್ಯಾರ್ಥಿಗಳ ತಂಡ ಅಭಿನೇಶ್ಗೆ ಥಳಿಸಿತ್ತು. ಇದರ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದ ಅಭಿನೇಶ್, ತಮಿಳುನಾಡಿನಿಂದ ತನ್ನ ಸ್ನೇಹಿತರನ್ನು ಬೆಂಗಳೂರಿಗೆ ಕರೆಸಿಕೊಂಡು ಈ ದಾಳಿ ಸಂಘಟಿಸಿದ್ದನು. “ಬರುವುದು ಬಂದಿದ್ದೇವೆ, ಬರೀ ಹೊಡೆಯುವುದು ಮಾತ್ರವಲ್ಲ ಎಲ್ಲವನ್ನೂ ದೋಚೋಣ” ಎಂಬ ಕ್ರಿಮಿನಲ್ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಕೋಣನಕುಂಟೆ ಪೊಲೀಸರು ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ತಮಿಳುನಾಡು ಮೂಲದ ನವೀನ್ ಕುಮಾರ್, ಕುಮಾರನ್, ವಿಮಲ್ ರಾಜ್, ಅಭಿನೇಶ್, ಕಲೈವೆಂದನ್ ಮತ್ತು ಪ್ರೇಮ್ ಕುಮಾರ್ ಎಂಬುವವರನ್ನು ಮಿಳುನಾಡಿನ ಕೊಯಮತ್ತೂರಿನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್, ಲ್ಯಾಪ್ಟಾಪ್ ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.




