ನವದೆಹಲಿ: ದೆಹಲಿಯ ಸಫ್ದರ್ಜಂಗ್ ಪ್ರದೇಶದ ಗ್ರೀನ್ ಪಾರ್ಕ್‌ನಲ್ಲಿರುವ ತಮ್ಮ ನಿವಾಸದಲ್ಲಿ ನ್ಯಾಯಾಧೀಶರೊಬ್ಬರು ಶನಿವಾರ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಮೃತರನ್ನು ಕಾರ್ಕಾರ್ಡೂಮಾ ನ್ಯಾಯಾಲಯಗಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (DLSA) ಪೂರ್ಣ ಸಮಯದ ಕಾರ್ಯದರ್ಶಿಯಾಗಿದ್ದ ಅಮನ್ ಕುಮಾರ್ ಶರ್ಮಾ (30) ಎಂದು ಗುರುತಿಸಲಾಗಿದೆ.
ಅಮನ್ ಅವರು ಸ್ನಾನಗೃಹದಲ್ಲಿ ದುಪಟ್ಟಾದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರು ನ್ಯಾಯಾಧೀಶೆಯಾಗಿರುವ ಪತ್ನಿಯೊಂದಿಗೆ ಜಗಳವಾಡುತ್ತಿದ್ದರು ಮತ್ತು ಘಟನೆಗೆ ಮುನ್ನ ತಂದೆಗೆ ಕರೆ ಮಾಡಿ ತಮಗೆ ಕಳೆದ ಎರಡು ತಿಂಗಳಿನಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಅಳುತ್ತಾ ಹೇಳಿಕೊಂಡಿದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಮನ್ ಅವರು ಮಾನಸಿಕ ಒತ್ತಡದಲ್ಲಿದ್ದರು ಮತ್ತು ಅವರಿಗೆ ಕಿರುಕುಳ ನೀಡಲಾಗಿತ್ತು ಎಂದು ಸಂಬಂಧಿಕರು ಗಂಭೀರವಾಗಿ ಆರೋಪಿಸಿದ್ದಾರೆ. ಅಮನ್ ಅವರು 2021ರಲ್ಲಿ ದೆಹಲಿ ನ್ಯಾಯಾಂಗ ಸೇವೆಗೆ ಸೇರ್ಪಡೆಗೊಂಡಿದ್ದರು. ಪೊಲೀಸರು ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.




