ನೆಲಮಂಗಲ: ಮಗಳ ಮದುವೆ ತಯಾರಿಯಲ್ಲಿದ್ದ ಕುಟುಂಬವೊಂದು ಆಮಂತ್ರಣಪತ್ರ ಕೊಡಲು ಪರವೂರಿಗೆ ಹೋಗಿಬರುವುದರ ಒಳಗೆ ವಿವಾಹಕ್ಕೆಂದು ಮಾಡಿಸಿಟ್ಟ ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿರುವ ಘಟನೆ ನೆಲಮಂಗಲ ಬಳಿಯ ದಾಸನಪುರದ ಮುನೇಶ್ವರ ಬಡಾವಣೆಯಲ್ಲಿ ನಡೆದಿದೆ. ಶಿವ ಮತ್ತು ಲೋಕೇಶ್ವರಿ ಎಂಬುವವರ ಮನೆಯ ಡೋರ್ ಒಡೆದು ಒಳ ನುಗ್ಗಿರುವ ಕಳ್ಳರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ, ನಗದು ದೋಚಿ ಎಸ್ಕೇಪ್ ಆಗಿದ್ದಾರೆ.
ತಮಿಳುನಾಡಿನ ಮೂಲವರಾದ ಲೋಕೇಶ್ವರಿ ಹಾಗೂ ಶಿವ ಎಂಬವರು ಸಾಕಷ್ಟು ವರ್ಷದಿಂದ ನೆಲಮಂಗಲದಲ್ಲಿ ನೆಲೆಸಿ ತಮ್ಮ ಜೀವನ ಕಟ್ಟುಕೊಂಡಿದ್ದರು. ಕೂಲಿ ನಾಲಿ ಮಾಡಿ ಜೀವನ ನಡೆಸುತ್ತಿದ್ದ ಇವರು ತಮ್ಮ ಮೂರನೇ ಮಗಳಾದ ಶಂಕರಿ ಮದುವೆ ತಯಾರಿಯಲ್ಲಿದ್ದರು. ಈ ಹಿನ್ನೆಲೆ ಕೂಡಿಟ್ಟ ಹಣದ ಜೊತೆಗೆ ಸಾಲ ಮಾಡಿ ಮಗಳಿಗೆ ಚಿನ್ನಾಭರಣ ತಂದಿದ್ದರು. ಈ ನಡುವೆ ಮದುವೆ ಆಮಂತ್ರಣ ಪತ್ರಿಕೆಯನ್ನ ವರನ ಮನೆಯವರಿಗೆ ಕೊಡಲೆಂದು ತಮಿಳುನಾಡಿಗೆ ಹೋಗಿ ಬರುವುದರ ಒಳಗೆ ಅವು ಕಳ್ಳರಪಾಲಾಗಿವೆ. ವಧುವಿಗೆಂದು ಖರೀದಿಸಿದ್ದ ನೆಕ್ಲೆಸ್, ಕಿವಿ ಓಲೆ, ಸೇರಿದಂತೆ 60 ಗ್ರಾಂಗಳಿಗೂ ಅಧಿಕ ಒಡವೆ ಮನೆಯಲ್ಲಿತ್ತು ಎನ್ನಲಾಗಿದೆ.
ಮಗಳ ಮದುವೆಯನ್ನು ಸಡಗರದಿಂದ ಮಾಡಬೇಕೆಂಬ ಆಸೆಯಲ್ಲಿದ್ದ ಕುಟುಂಬಕ್ಕೆ ಈ ಘಟನೆ ಭಾರಿ ಆಘಾತ ತಂದಿದ್ದು, ವಿವಾಹ ನೆರವೇರಿಸೋದು ಹೇಗೆಂಬ ಆತಂಕ ಕಾಡತೊಡಗಿದೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶೀಘ್ರ ಕಳ್ಳರನ್ನು ಪತ್ತೆ ಮಾಡಿ ತಮ್ಮ ಬಂಗಾರ ಮರಳಿ ಸಿಗುವಂತೆ ಮಾಡಿ ಎಂದು ಕುಟುಂಬ ಅಂಗಲಾಚಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕೂಡ ಬಲೆ ಬೀಸಿದ್ದಾರೆ. ಘಟನೆಯಿಂದ ಸ್ಥಳೀಯರೂ ಬೆಚ್ಚಿಬಿದ್ದಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಆತಂಕ ಮನೆ ಮಾಡಿದೆ.




