ಮಂಗಳೂರು: ನಿಷೇಧಿತ ಮಾದಕ ವಸ್ತು ಸೇವನೆ ಮಾಡಿದ ಆರೋಪದ ಮೇರೆಗೆ ಇಬ್ಬರು ಯುವಕರನ್ನು ಮಂಗಳೂರಿನ ಕಾವೂರು ಪೊಲೀಸರು ಬಂಧಿಸಿದ್ದಾರೆ. ಕೊಡ್ಯಡ್ಕ ಮಿತ್ತಬೈಲ್ ನಿವಾಸಿ ಶ್ರವಣ್ (19) ಮತ್ತು ಮುಲ್ಲಕಾಡು ನಿವಾಸಿ ಪ್ರಥಮ್ (21) ಬಂಧಿತ ಆರೋಪಿಗಳಾಗಿದ್ದಾರೆ.
ಕಾವೂರು ಪೊಲೀಸ್ ನಿರೀಕ್ಷಕ ರಾಘವೇಂದ್ರ ಎಂ. ಬೈಂದೂರು ಮತ್ತು ಸಿಬ್ಬಂದಿ ಮಧ್ಯಾಹ್ನ ಗಸ್ತು ನಿರತರಾಗಿದ್ದ ವೇಳೆ ಮುಲ್ಲಕಾಡು ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಈ ಯುವಕರು ಮಾದಕ ಸೇವನೆ ಮಾಡಿದಂತೆ ಕಂಡುಬಂದಿದ್ದರು. ತಕ್ಷಣ ವಶಕ್ಕೆ ಪಡೆದು ಕೂಲಂಕಷವಾಗಿ ವಿಚಾರಿಸಿದಾಗ ಮಾದಕ ಸೇವನೆ ಮಾಡಿ ರುವುದನ್ನು ಒಪ್ಪಿಕೊಂಡಿದ್ದರು. ಬಳಿಕ ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದಯೆಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




