ಬೆಂಗಳೂರು: ಸಮಾಜದಲ್ಲಿ ಹಳೆಯ ದ್ವೇಷಕ್ಕೆ, ರೋಷಕ್ಕೆ ಕೊಲೆ ನಡೆದ ಉದಾಹರಣೆಗಳಿವೆ. ಹೆಣ್ಣಿಗಾಗಿ, ಹಣಕ್ಕಾಗಿಯೂ ಕೊಲೆ, ಸುಲಿಗೆಗಳು ನಡೆಯುತ್ತವೆ. ಆದರೆ ಕೇವಲ 200 ರೂ. ಸಾಲ ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಿದ ಪ್ರಕರಣ ಇದೇ ಮೊದಲಿರಬಹುದು. ಹೌದು, ಟೀ ಅಂಗಡಿ ಮಾಲೀಕ ಬಾಕಿ ಇರುವ ಹಣ ನೀಡುವಂತೆ ಕೇಳಿದ ಕಾರಣಕ್ಕೇ ದೊಡ್ಡಬಳ್ಳಾಪುರ ತಾಲೂಕಿನ ಅಪ್ಪಕಾರನಹಳ್ಳಿ ಗೇಟ್ನಲ್ಲಿ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾನೆ.
ಇನ್ನು ಮುಂದೆ ಸಾಲ ಕೊಡುವುದಿಲ್ಲ ಎಂದಿದ್ದ ಮಾಲೀಕ
ದ್ಯಾವಸಂದ್ರ ಗ್ರಾಮದ ಮಂಜುನಾಥ (40) ಕೊಲೆಯಾದ ದುರ್ದೈವಿ. ಮೇ 12 ರಂದು ಅಪ್ಪಕಾರನಹಳ್ಳಿಯ ಮುನಿಯಪ್ಪ ಎಂಬಾತ ಮಂಜುನಾಥ್ ಅವರ ಟೀ ಅಂಗಡಿಗೆ ಬಂದು ಮತ್ತೆ ಸಾಲ ಕೇಳಿದ್ದ. ಈ ವೇಳೆ ಮಾಲೀಕ ಮಂಜುನಾಥ್, ಹಳೆಯ ಟೀ ಸಾಲದ ಬಾಕಿ ಹಣ 200 ರೂ.ಕೊಡು, ಇನ್ನು ಮುಂದೆ ಸಾಲ ಕೊಡುವುದಿಲ್ಲ ಎಂದು ಹೇಳಿದ್ದ.
ಈ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಆರೋಪಿ ಮುನಿಯಪ್ಪ, ಪಕ್ಕದಲ್ಲೇ ಇದ್ದ ನೀಲಗಿರಿ ದೊಣ್ಣೆಯನ್ನು ತೆಗೆದುಕೊಂಡು ಮಂಜುನಾಥ್ ತಲೆಗೆ ಮನಸೋಇಚ್ಛೆ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದ. ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಂಜುನಾಥ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಹೆತ್ತ ತಾಯಿಗೂ ಚಾಕು ಹಾಕಿದ್ದ ಆರೋಪಿ!
ಆರೋಪಿ ಮುನಿಯಪ್ಪ ಈ ಹಿಂದೆ ಹೆತ್ತ ತಾಯಿಗೂ ಚಾಕು ಹಾಕಿ ಜೈಲು ಸೇರಿದ್ದ. ಇತ್ತೀಚೆಗಷ್ಟೇ ಬೇಲ್ ಮೇಲೆ ಹೊರಗೆ ಬಂದಿದ್ದ ಈತ ಈಗ ಮತ್ತೊಂದು ಕೊಲೆ ಮಾಡಿದ್ದಾನೆ. ದೊಡ್ಡಬೆಳವಂಗಲ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.




