ಕುಂದಾಪುರ: ಖಾಸಗಿ ಬಸ್ಸೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಅದೃಷ್ಟವಶಾತ್, ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಕುಂದಾಪುರ-ಶಿವಮೊಗ್ಗ ರಾಜ್ಯ ಹೆದ್ದಾರಿ 52ರ ಹುಲಿಕಲ್ ಘಾಟ್‌ನಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.ಹುಲಿಕಲ್ ಘಾಟ್‌ನಲ್ಲಿ ಭೂಕುಸಿತದ ಕಾರಣ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾಗರದಿಂದ ಬಂದಿದ್ದ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಶ್ರೀ ಚಂಡಿಕಾಂಬ ದೇವಸ್ಥಾನದ ಬಳಿ ಇಳಿಸಲಾಗಿತ್ತು. ಬಳಿಕ, ಬಾಳೆಬರೆ ಘಾಟ್ ಮೂಲಕ ಉಡುಪಿಗೆ ತೆರಳುತ್ತಿದ್ದ ಮತ್ತೊಂದು ಬಸ್, ತನ್ನ ಪ್ರಯಾಣ ಆರಂಭಿಸಿದ ಕೇವಲ 300 ಮೀಟರ್ ಅಂತರದಲ್ಲಿ ಬೆಂಕಿಗೆ ಆಹುತಿಯಾಗಿದೆ. ಈ ಬಸ್‌ನಲ್ಲಿ 17 ಮಂದಿ ಪ್ರಯಾಣಿಕರಿದ್ದರು.ಬಸ್‌ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ತಕ್ಷಣ ಚಾಲಕ ಮತ್ತು ನಿರ್ವಾಹಕರು ಸಮಯಪ್ರಜ್ಞೆ ಮೆರೆದಿದ್ದಾರೆ. ತಕ್ಷಣವೇ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಪ್ರಯಾಣಿಕರು ಕೆಳಗಿಳಿದ ಕೆಲವೇ ಕ್ಷಣಗಳಲ್ಲಿ ಬಸ್‌ನಿಂದ ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದು, ಬಸ್ ಬೆಂಕಿಗಾಹುತಿಯಾಗಿದೆ.ಈ ಘಟನೆಯಿಂದಾಗಿ ಘಾಟ್ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸ್ಥಳೀಯರ ಸಹಾಯದಿಂದ ಪೊಲೀಸರು ರಸ್ತೆಯಲ್ಲಿದ್ದ ವಾಹನಗಳನ್ನು ತೆರವುಗೊಳಿಸಿ, ಸಂಚಾರ ಸುಗಮಗೊಳಿಸಿದರು.




