ಮಂಗಳೂರು: ಸುಮಾರು ಐದು ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಇಬ್ಬರು ವಾರೆಂಟ್ ಆರೋಪಿಗಳನ್ನು ಬರ್ಕೆ ಪೊಲೀಸ್ ಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪತ್ತೆಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತರನ್ನು ನರಿಂಗಾಣ ಗ್ರಾಮದ ತೌಡಗೊಳಿ ಕ್ರಾಸ್ ನಿವಾಸಿ ಅಬ್ದುಲ್ ಖಾದರ್ ತನ್ಸಿಪ್ @ ತಂಜಿ ಹಾಗೂ ಅಡ್ಯಾರ ಕಣ್ಣೂರು ನಿವಾಸಿ ಮೊಹಮ್ಮದ್ ರಾಜೀಕ್ ಎಂದು ಗುರುತಿಸಲಾಗಿದೆ.
ಅಬ್ದುಲ್ ಖಾದರ್ ತನ್ಸಿಪ್ ವಿರುದ್ಧ ಬರ್ಕೆ ಪೊಲೀಸ್ ಠಾಣೆಯ ಅ.ಕ್ರ.ನಂ. 18/2021ರಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಸುಮಾರು ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯವು ವಾರೆಂಟ್ ಜಾರಿಗೊಳಿಸಿತ್ತು. ಈತನ ವಿರುದ್ಧ ಕೊಣಾಜೆ, ಮಂಜೇಶ್ವರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲೂ ಪ್ರಕರಣಗಳು ದಾಖಲಾಗಿವೆ.
ಇನ್ನೊಬ್ಬ ಆರೋಪಿತ ಮೊಹಮ್ಮದ್ ರಾಜೀಕ್ ವಿರುದ್ಧ ಬರ್ಕೆ ಪೊಲೀಸ್ ಠಾಣೆಯ ಅ.ಕ್ರ.ನಂ. 17/2021ರಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಈತನೂ ಸಹ ಸುಮಾರು ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಕಂಕನಾಡಿ, ಬೆಳ್ತಂಗಡಿ, ಪುತ್ತೂರು ಹಾಗೂ ಕದ್ರಿ ಪೊಲೀಸ್ ಠಾಣೆಗಳಲ್ಲೂ ಪ್ರಕರಣಗಳು ದಾಖಲಾಗಿವೆ.
ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬರ್ಕೆ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪತ್ತೆಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.



