ರಾಜಸ್ಥಾನ: ಮದುವೆಯ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ದುರಂತಕ್ಕೆ ಕಾರಣವಾಗಿದೆ. . ರಾಜ್‌ಸಮಂದ್ ಜಿಲ್ಲೆಯ ಅರಾವಳಿ ಬೆಟ್ಟಗಳ ಸಾಲಿನಲ್ಲಿರುವ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣವಾದ ಗೌರಿಧಾಮದಲ್ಲಿ ಫೋಟೋಶೂಟ್ ನಡೆಸುತ್ತಿದ್ದಾಗ ಯುವಕನೊಬ್ಬ ಸರೋವರದಲ್ಲಿ ಕಾಲು ಜಾರಿ ಬಿದ್ದು, ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಎಸ್‌ಡಿಆರ್‌ಎಫ್ (SDRF) ತಂಡ ನಡೆಸಿದ ಸುದೀರ್ಘ ಕಾರ್ಯಾಚರಣೆಯ ನಂತರ ಬುಧವಾರ ಯುವಕನ ಶವ ಪತ್ತೆಯಾಗಿದೆ.ಚಿತ್ತೋರ್‌ಗಢ ನಿವಾಸಿ ಅರ್ಜುನ್ ದಮಾಮಿ ಮೃತಪಟ್ಟ ದುರ್ದೈವಿ ಯುವಕ.ಪೊಲೀಸರ ಮಾಹಿತಿಯ ಪ್ರಕಾರ, ಅರ್ಜುನ್ ದಮಾಮಿ ಶೀಘ್ರದಲ್ಲೇ ಮದುವೆಯಾಗಲಿದ್ದ ತನ್ನ ಭಾವಿ ವಧು ಮತ್ತು ಆಕೆಯ ಚಿಕ್ಕಪ್ಪನೊಂದಿಗೆ ಗೌರಿಧಾಮ ದೇವಸ್ಥಾನಕ್ಕೆ ಭೇಟಿ ನೀಡಲು ಹಾಗೂ ವಿವಾಹ ಪೂರ್ವ ಫೋಟೋಶೂಟ್‌ಗಾಗಿ ಬಂದಿದ್ದ. ಚಿಕ್ಕಪ್ಪ ದೇವಾಲಯ ಸಂಕೀರ್ಣದ ಬಳಿಯೇ ಉಳಿದುಕೊಂಡಿದ್ದರು. ಆದರೆ ಅರ್ಜುನ್ ಮತ್ತು ಆತನ ಭಾವಿ ವಧು ಫೋಟೋಶೂಟ್‌ಗಾಗಿ ನದಿಯ ತಳಭಾಗಕ್ಕೆ ಇಳಿದಿದ್ದರು. ಈ ನಡುವೆ ಅರ್ಜುನ್ ಸರೋವರದ ಬಳಿ ಸ್ನಾನ ಮಾಡಲು ತೆರಳಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಆಳವಾದ ನೀರಿಗೆ ಬಿದ್ದಿದ್ದಾನೆ. ಆತ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಆಘಾತಕ್ಕೊಳಗಾದ ಆತನ ಭಾವಿ ವಧು ಜೋರಾಗಿ ಕಿರುಚಾಡಿ ಜನರನ್ನು ಕೂಗಿದ್ದಾಳೆ. ಸ್ಥಳೀಯರು ತಕ್ಷಣವೇ ಪೊಲೀಸರು ಮತ್ತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಆದರೆ ಕತ್ತಲೆ ಆವರಿಸಿದ್ದರಿಂದ ಮತ್ತು ಸರೋವರವು ಅತ್ಯಂತ ಆಳವಾಗಿದ್ದರಿಂದ ಮಂಗಳವಾರ ರಾತ್ರಿ ಯುವಕನ ಪತ್ತೆ ಸಾಧ್ಯವಾಗಲಿಲ್ಲ. ತದನಂತರ ಉದಯಪುರದಿಂದ ವಿಶೇಷ ಎಸ್‌ಡಿಆರ್‌ಎಫ್ ಮತ್ತು ರಾಜ್‌ಸಮಂದ್ ನಾಗರಿಕ ರಕ್ಷಣಾ ತಂಡವನ್ನು ಜಂಟಿಯಾಗಿ ಕಣಕ್ಕಿಳಿಸಲಾಯಿತು. ಬುಧವಾರ ಬೆಳಗ್ಗೆ ಜಂಟಿ ಶೋಧ ಕಾರ್ಯಾಚರಣೆ ನಡೆಸಿ ಹಲವಾರು ಗಂಟೆಗಳ ಸತತ ಪ್ರಯತ್ನದ ಬಳಿಕ ಅರ್ಜುನ್ ದಮಾಮಿಯ ಶವವನ್ನು ಸರೋವರದಿಂದ ಹೊರತೆಗೆಯಲಾಗಿದೆ. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದ್ದು, ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.



