ಪುತ್ತೂರು: ಪಾನಮತ್ತನಾಗಿದ್ದಂತ ಪ್ರಯಾಣಿಕನೊಬ್ಬ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ( KSRTC Bus ) ತನ್ನೂರಿಗೆ ತೆರಳೋದಕ್ಕೆ ಹೋದಂತ ಸಂದರ್ಭದಲ್ಲಿ, ಆತನ ಮೇಲೆ ಹಲ್ಲೆ ನಡೆಸಿ, ಹೊರಗೆ ಕಾಲಿನಿಂದ ಒದ್ದು ನಿರ್ವಾಹಕ ತಳ್ಳಿದ್ದರು. ಇದರಿಂದಾಗಿ ಅಂಗಾತವಾಗಿ ಬಸ್ ಡೋರಿನಿಂದ ಹೊರಗೆ ಬಿದ್ದಂತ ಪ್ರಯಾಣಿಕ ಗಾಯಗೊಂಡಿದ್ದನು. ಈ ಘಟನೆಯ ಹಿನ್ನಲೆಯಲ್ಲಿ ನಿರ್ವಾಹಕನನ್ನು ಅಮಾನತುಗೊಳಿಸಿ, ಸಾರಿಗೆ ನಿಗಮ ಆದೇಶಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರಮಂಗಲ ಮಾರ್ಗವಾಗಿ ಸುಳ್ಯಪದವು ಕಡೆಗೆ ಸಂಜೆ ತೆರಳುತ್ತಿದ್ದಂತ ಕೆ ಎಸ್ ಆರ್ ಟಿ ಸಿ ಬಸ್ ಗೆ ಪಾನಮತ್ತನಾಗಿದ್ದಂತ ಪ್ರಯಾಣಿಕನೊಬ್ಬ ಏರಿದ್ದಾನೆ. ಹೀಗೆ ಬಸ್ಸನ್ನು ಏರಿದಂತ ಪ್ರಯಾಣಿಕನನ್ನು ಹತ್ತಿಸಿಕೊಳ್ಳದೇ ನಿರ್ವಾಹಕ ಕೆಳಗೆ ಇಳಿಯುವಂತೆ ಸೂಚಿಸಿದ್ದನು.
ಕಂಡಕ್ಟರ್ ಮಾತಿಗೆ ಒಪ್ಪದಂತ ಪಾನಮತ್ತ ಪ್ರಯಾಣಿಕ ಮಾತ್ರ ಬಸ್ಸಿನಿಂದ ಇಳಿದಿಲ್ಲ. ಈ ವೇಳೆಗೆ ಸಿಟ್ಟುಗೊಂಡಂತ ನಿರ್ವಾಹಕ ಆತನ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಬಸ್ಸಿನ ಡೋರಿನಿಂದ ಕಾಲಿನಿಂದ ಒದ್ದಿದ್ದಾನೆ. ಆಗ ಪಾನಮತ್ತ ಪ್ರಯಾಣಿಕ ರಸ್ತೆಗೆ ಅಂಗಾತ ಬಿದ್ದು ಪೆಟ್ಟುಗೊಂಡಿರೋ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ವಿಷಯ ತಿಳಿದಂತ ರೈತ ಸಂಘದ ಜಿಲ್ಲಾಧ್ಯಕ್ಷ ಅಮರನಾಥ ಆಳ್ವ, ಸಾರಿಗೆ ಬಸ್ ನಿರ್ವಾಹಕನ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಸಂಬಂಧ ಪಟ್ಟಂತ ಅಧಿಕಾರಿಗಳು ಈ ನಡೆ ತೋರಿದಂತ ನಿರ್ವಾಹಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಈ ಬೆನ್ನಲ್ಲೇ ಕೆ ಎಸ್ ಆರ್ ಟಿಸಿಯಿಂದ ಚಾಲಕ ಕಂ ನಿರ್ವಾಹಕ ಸುಖರಾಜ ರೈ ಎಂ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ. ಅಲ್ಲದೇ ನಿಗಮದ ಚಾಲನಾ ಸಿಬ್ಬಂದಿಗಳಿಗೆ ಸಾರ್ವಜನಿಕ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ನಿರಂತರ ತರಬೇತಿ ಹಾಗೂ ತಿಳುವಳಿಕೆ ನೀಡಿದ್ದಾಗ್ಯೂ ಸಹ ಈ ರೀತಿಯ ಘಟನೆ ನಡೆದಿರುವುದು ದುಃಖದ ಸಂಗತಿಯಾಗಿದೆ ಎಂದಿದೆ.
ನಿಗಮದ ಸಿಬ್ಬಂದಿಗಳಿಗೆ ಇನ್ನೂ ಹೆಚ್ಛಿನ ತರಬೇತಿ ನೀಡಿ ಪ್ರಯಾಣಿಕರೊಡನೆ ಸೌಜನ್ಯವಾಗಿ ವರ್ತಿಸುವ ಸಂಬಂಧ ಕ್ರಮಕೈಗೊಳ್ಳಲಾಗುವುದು ಹಾಗೂ ಈ ರೀತಿಯ ಘಟನೆಗಳಿಗೆ ಕಾರಣರಾಗುವ ಸಿಬ್ಬಂದಿಗಳ ಮೇಲೆ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಲಾಗಿದೆ. ಸದರಿ ಪ್ರಯಾಣಿಕರ ವೈದ್ಯಕೀಯ ವೆಚ್ಚವನ್ನು ನಿಗಮವು ಭರಿಸಲಿದೆ ಎಂದು ಹೇಳಿದೆ.