ಕೋಝಿಕ್ಕೋಡ್: ಕೋಟಿ ಕೋಟಿ ಬೆಲೆಬಾಳುವ ಕಾರುಗಳ ಮಾಲೀಕರಿಗೆ ನೂರು-ಇನ್ನೂರು ರೂಪಾಯಿ ದೊಡ್ಡ ಮೊತ್ತವೇ ಅಲ್ಲ. ಆದರೆ, ರಾಷ್ಟ್ರೀಯ ಹೆದ್ದಾರಿ 66 ರ ಪಂಥೀರಂಕಾವು ಟೋಲ್ ಪ್ಲಾಜಾದಲ್ಲಿ ಜೂನ್ 4 ರಂದು ನಡೆದಿರುವ ಘಟನೆ ಮಾತ್ರ ಅಧಿಕಾರಿಗಳನ್ನೇ ಆಘಾತಕ್ಕೀಡು ಮಾಡಿದೆ. ಬರೋಬ್ಬರಿ 9 ಕೋಟಿ ರೂಪಾಯಿ ಮೌಲ್ಯದ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ಚಾಲಕನೊಬ್ಬ ಕೇವಲ 130 ರೂಪಾಯಿ ಟೋಲ್ ಶುಲ್ಕವನ್ನು ಪಾವತಿಸದೆ ಜಾಣತನದಿಂದ ವೇಗವಾಗಿ ಕಾರು ಚಲಾಯಿಸಿ ಪರಾರಿಯಾಗಿದ್ದಾನೆ.ಜೂನ್ 4ರ ಸಂಜೆ ಈ ಘಟನೆ ನಡೆದಿದ್ದು, ಕಪ್ಪು ಬಣ್ಣದ ಐಷಾರಾಮಿ ರೋಲ್ಸ್ ರಾಯ್ಸ್ ಕಾರು ಟೋಲ್ ಕೌಂಟರ್‌ನಲ್ಲಿ ಕಾಯುತ್ತಿದ್ದ ಮತ್ತೊಂದು ವಾಹನವನ್ನು ಹತ್ತಿರದಿಂದ ಹಿಂಬಾಲಿಸುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಮುಂಭಾಗದ ವಾಹನವು ಟೋಲ್ ಪಾವತಿಸಿ ಬೂಮ್ ಬ್ಯಾರಿಯರ್ (ತಡೆಗೋಡೆ) ಮೇಲಕ್ಕೆದ್ದ ತಕ್ಷಣ, ರೋಲ್ಸ್ ರಾಯ್ಸ್ ಚಾಲಕ ಬ್ಯಾರಿಯರ್ ಮುಚ್ಚುವ ಮೊದಲೇ ಅತ್ಯಂತ ವೇಗವಾಗಿ ಲೇನ್ ಮೂಲಕ ಕಾರನ್ನು ನುಗ್ಗಿಸಿ ಟೋಲ್ ವಂಚಿಸಿದ್ದಾನೆ.ಟೋಲ್ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅದು ಹರಿಯಾಣ ನೋಂದಣಿಯ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಎಂದು ಪತ್ತೆಯಾಗಿದೆ. ಅಧಿಕಾರಿಗಳು ಈ ವಾಹನದ ಫಾಸ್ಟ್‌ಟ್ಯಾಗ್ ಖಾತೆ ವಿವರ ಹಾಗೂ ಸಿಸಿಟಿವಿ ದೃಶ್ಯಗಳನ್ನು ಮುಂದಿನ ಕ್ರಮಕ್ಕಾಗಿ ಪಂಥೀರಂಕಾವು ಪೊಲೀಸರು ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಹಸ್ತಾಂತರಿಸಿದ್ದಾರೆ.ಇತ್ತೀಚೆಗೆ ರಾಮನಟ್ಟುಕರ ಮತ್ತು ವೆಂಗಲಂ ನಡುವಿನ ಆರು ಪಥದ NH 66 ರ ಟೋಲ್ ಪ್ಲಾಜಾ ಆರಂಭವಾದಾಗಿನಿಂದ ನಿತ್ಯ ಸರಾಸರಿ 200 ವಾಹನಗಳು ಟೋಲ್ ತಪ್ಪಿಸುತ್ತವೆ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಟೋಲ್ ಪಾವತಿಸದ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾಯೋಗಿಕ ಮತ್ತು ಕಾನೂನು ಮಿತಿಗಳಿವೆ ಎಂದು ಪಂಥೀರಂಕವು ಪೊಲೀಸರು ತಿಳಿಸಿದ್ದಾರೆ. “ಟೋಲ್ ಬೂತ್‌ಗೆ ಹಣ ನೀಡದೆ ಹೋದ ತಕ್ಷಣವೇ ದಂಡ ವಿಧಿಸಲು ಕಾನೂನಿನಲ್ಲಿ ಯಾವುದೇ ನಿರ್ದಿಷ್ಟ ನಿಬಂಧನೆಗಳಿಲ್ಲ. ಟೋಲ್ ಪ್ಲಾಜಾದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅಥವಾ ಘರ್ಷಣೆ ನಡೆದರೆ ಮಾತ್ರ ನಾವು ಹಸ್ತಕ್ಷೇಪ ಮಾಡಬಹುದು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.




