ಕಾರವಾರ: ಕಾರವಾರ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದ ಬೋಟ್ ಒಂದನ್ನು ಉಡುಪಿಗೆ ಎಳೆದೊಯ್ಯುವ ವೇಳೆ ಮಲ್ಪೆ ಸಮೀಪ ಸಮುದ್ರದಲ್ಲಿ ಮುಳುಗಿ ದುರಂತ ಸಂಭವಿಸಿದೆ. ಅದೃಷ್ಟವಶಾತ್ ಏಳು ಮಂದಿ ಮೀನುಗಾರರನ್ನ ಪಾರು ಮಾಡಲಾಗಿದೆ. ಕಾರವಾರ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಬೋಟ್ ಒಂದು ಕೆಟ್ಟು ನಿಂತಿತ್ತು. ಕೆಟ್ಟು ನಿಂತ ಬೋಟನ್ನ ಆರು ಬೋಟುಗಳ ನೆರವಿನಿಂದ ಎಳೆದೊಯ್ಯಲಾಗುತ್ತಿತ್ತು.
ಉಡುಪಿಯ ಮಲ್ಪೆ ಸಮೀಪಿಸುತ್ತಿದ್ದಂತೆ ಕಡಲಿನಲ್ಲಿ ಉಂಟಾದ ಪ್ರಕ್ಷುಬ್ಧತೆಯಿಂದ ಬೋಟಿನಲ್ಲಿ ನೀರು ತುಂಬಲಾರಂಭಿಸಿದೆ. ತಕ್ಷಣ ಇತರ ಬೋಟುಗಳಲ್ಲಿದ್ದವರು ನೀರು ತುಂಬುತ್ತಿದ್ದ ಬೋಟಿನಲ್ಲಿದ್ದ ಏಳು ಮಂದಿ ಮೀನುಗಾರರನ್ನ ತಮ್ಮ ಬೋಟಿಗೆ ಕರೆದುಕೊಂಡಿದ್ದಾರೆ. ನಾಲ್ವರು ಆಂಧ್ರಪ್ರದೇಶ ಹಾಗೂ ಮೂವರು ಭಟ್ಕಳದ ಮೀನುಗಾರರು ಈ ಬೋಟಿನಲ್ಲಿದ್ದರು. ಮೀನುಗಾರರು ಸುರಕ್ಷಿತವಾಗಿ ಇನ್ನೊಂದು ಬೋಟನ್ನ ಹತ್ತುತ್ತಿದ್ದಂತೆ ಕೆಟ್ಟಿದ್ದ ಬೋಟಿನಲ್ಲಿ ಸಂಪೂರ್ಣ ನೀರು ತುಂಬಿ ನೋಡ ನೋಡುತ್ತಿದ್ದಂತೆ ಸಮುದ್ರದಲ್ಲಿ ಮುಳುಗಡೆಯಾಗಿದೆ.