ರಾಯಚೂರು: ಜಿಲ್ಲೆಯ ಅರಕೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೋಹರಂ ಬಂದೋಬಸ್ತ್‌ಗಾಗಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್‌ಟೇಬಲ್, ಎದೆನೋವು ಕಾಣಿಸಿಕೊಂಡ ಬಳಿಕ ಆಸ್ಪತ್ರೆಗೆ ತಲುಪಿದ ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೃತ ಪೊಲೀಸ್ ಕಾನ್ಸ್‌ಟೇಬಲ್‌ರನ್ನು ರೇಣುಕಾರಾಜ್ (38) ಎಂದು ಗುರುತಿಸಲಾಗಿದೆ. ಅವರು ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಾನ್ಸ್‌ಟೇಬಲ್ ಆಗಿದ್ದು, ದೇವದುರ್ಗ ಸಿಪಿಐ ಅವರ ವಾಹನ ಚಾಲಕರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು.
ಮೋಹರಂ ಹಬ್ಬದ ಭದ್ರತೆ ಹಿನ್ನೆಲೆಯಲ್ಲಿ ಮದರಕಲ್ ಪ್ರದೇಶದಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದ ವೇಳೆ ರೇಣುಕಾರಾಜ್ ಅವರಿಗೆ ಜೀಪ್ ಚಾಲನೆ ಮಾಡುತ್ತಿದ್ದಾಗಲೇ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಹೋದ್ಯೋಗಿಗಳು ಕೂಡಲೇ ಖಾಸಗಿ ಕಾರಿನಲ್ಲಿ ಅರಕೇರಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ರಾತ್ರಿ ಸುಮಾರು 10.30 ಗಂಟೆ ವೇಳೆಗೆ ಆಸ್ಪತ್ರೆಗೆ ಕರೆತರಲಾಯಿತಾದರೂ, ಪ್ರಾಥಮಿಕ ಚಿಕಿತ್ಸೆ ನೀಡುವ ಪ್ರಯತ್ನ ನಡೆಯುವಷ್ಟರಲ್ಲಿ ರೇಣುಕಾರಾಜ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ಆಸ್ಪತ್ರೆಯಲ್ಲಿ ಕಾಯಂ ವೈದ್ಯರು ಲಭ್ಯವಿರಲಿಲ್ಲ ಹಾಗೂ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಅಮೂಲ್ಯ ಜೀವ ಬಲಿಯಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ವಿಚಾರ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರ ಕೊರತೆ ಮತ್ತೆ ಚರ್ಚೆಗೆ ಬಂದಿದೆ. ಆಸ್ಪತ್ರೆಗೆ ಬಂದ ಬಳಿಕ ರೇಣುಕಾರಾಜ್ ಕುಸಿದು ಬಿದ್ದ ದೃಶ್ಯಗಳು ಆಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯೊಬ್ಬರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದರೂ ಜೀವ ಉಳಿಸಿಕೊಳ್ಳಲಾಗದಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.




