ಕೇರಳ: ಕಳೆದ ಎರಡು ವರ್ಷಗಳ ಹಿಂದೆ ಚೂರಲ್ಮಲದಲ್ಲಿ ನಡೆದಿದ್ದ ಭೀಕರ ಭೂಕುಸಿತದ ಕಹಿ ನೆನಪು ಮಾಸುವ ಮುನ್ನವೇ, ಕೇರಳದ ವಯನಾಡಿನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಮೆಪ್ಪಾಡಿ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಸುರಂಗ ಮಾರ್ಗ ನಿರ್ಮಾಣದ ಪ್ರದೇಶದಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದ್ದು, ಇಬ್ಬರು ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ. ವಯನಾಡು ಸುರಂಗ ಯೋಜನೆಯ ಮೀನಾಕ್ಷಿ ಸೇತುವೆ ಬಳಿ ಈ ಘಟನೆ ನಡೆದಿದೆ.
ಅವಶೇಷಗಳಡಿ ಸಿಲುಕಿದ ಕಾರ್ಮಿಕರು; ಮುಂದುವರಿದ ಆತಂಕ
ದುರಂತದ ತೀವ್ರತೆಗೆ ಸುಮಾರು 20 ಕಾರ್ಮಿಕರು ಮಣ್ಣಿನ ರಾಶಿಯಡಿಯಲ್ಲಿ ಸಿಲುಕಿಕೊಂಡಿದ್ದು, 30 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ನೂರಾರು ವಾಹನಗಳು ಕೂಡ ಮಣ್ಣಿನಡಿ ಹೂತುಹೋಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ. ಸ್ಥಳೀಯರ ಸಕಾಲಿಕ ರಕ್ಷಣಾ ಕಾರ್ಯಾಚರಣೆಯಿಂದಾಗಿ ಆರು ಜನರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದ್ದು, ಅವರನ್ನು ಮೆಪ್ಪಾಡಿಯ ಡಾ. ಮೂಪೆನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಗೊಂಡವರನ್ನು ಹೀರಾ ಸುರೇಶ್, ದಿಲೀಪ್, ಸೂರಜ್, ಸಂಜಯ್ ಥಾಪುರ್, ರಜನೀಶ್ ಮತ್ತು ತನ್ಮಯ್ ಘೋಷ್ ಎಂದು ಗುರುತಿಸಲಾಗಿದ್ದು, ಇವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ.




