ಮಣಿಪಾಲ: ಪಾದಚಾರಿಯನ್ನು ರಕ್ಷಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಈಚರ್ ಲಾರಿಯೊಂದು ರಸ್ತೆ ಬದಿಯ ಟ್ರಾನ್ಸ್ಫಾರ್ಮರ್ ಹಾಗೂ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು, ಬಳಿಕ ಮನೆಯೊಂದರ ಅಂಗಳಕ್ಕೆ ನುಗ್ಗಿದ ಘಟನೆ ಪೆರಂಪಳ್ಳಿಯ ಮೀನು ಮಾರುಕಟ್ಟೆ ಸಮೀಪ ಜುಲೈ 25 ರ ರಾತ್ರಿ ಸಂಭವಿಸಿದೆ.
ಕಾರ್ಕಳ ಮೂಲದ ಉಮೇಶ್ ಎಂಬುವವರು ಲಾರಿಯನ್ನು ಮಣಿಪಾಲದಿಂದ ಪೆರಂಪಳ್ಳಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬರು ಏಕಾಏಕಿ ರಸ್ತೆ ದಾಟಿದ್ದಾರೆ. ಅವರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ತಕ್ಷಣವೇ ಲಾರಿಯನ್ನು ಎಡಕ್ಕೆ ತಿರುಗಿಸಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ಟ್ರಾನ್ಸ್ಫಾರ್ಮರ್ಗೆ ಸೈಡ್ ಹೊಡೆದು, ಸ್ಥಳೀಯ ನಿವಾಸಿ ರವಿ ಪೂಜಾರಿ ಎಂಬವರ ಮನೆಯ ಅಂಗಳಕ್ಕೆ ನುಗ್ಗಿದೆ.
ಅಪಘಾತದ ರಭಸಕ್ಕೆ ರವಿ ಅವರ ಮನೆಯಂಗಳದ ಸಿಮೆಂಟ್ ಶೀಟ್ಗೆ ಹಾನಿಯಾಗಿದ್ದು, ಲಾರಿಯ ಮುಂಭಾಗ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಅದೃಷ್ಟವಶಾತ್ ಅಪಘಾತ ಸಂಭವಿಸಿದ ಸಮಯದಲ್ಲಿ ರಸ್ತೆ ಬದಿಯಲ್ಲಾಗಲಿ ಅಥವಾ ಮನೆಯ ಅಂಗಳದಲ್ಲಾಗಲಿ ಯಾರೂ ಇಲ್ಲದಿದ್ದರಿಂದ ಭಾರಿ ಜೀವಅಪಾಯವೊಂದು ತಪ್ಪಿದೆ. ಲಾರಿ ಚಾಲಕ ಉಮೇಶ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದ ವಿದ್ಯುತ್ ಕಂಬ ಹಾಗೂ ಟ್ರಾನ್ಸ್ಫಾರ್ಮರ್ಗೆ ಹಾನಿಯಾದ ಹಿನ್ನೆಲೆಯಲ್ಲಿ ಮೆಸ್ಕಾಂ (MESCOM) ಅಧಿಕಾರಿಗಳು ಚಾಲಕನಿಂದ ನಷ್ಟ ಪರಿಹಾರ/ದಂಡ ವಸೂಲಿ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಮಣಿಪಾಲ ಪೊಲೀಸರು ಕೂಡ ಪರಿಶೀಲಿಸಿ ದಂಡ ವಿಧಿಸಿದ್ದು, ಯಾವುದೇ ಎಫ್ಐಆರ್ ದಾಖಲಿಸದೆ ಚಾಲಕನನ್ನು ಬಿಟ್ಟಿದ್ದಾರೆ. ತಡರಾತ್ರಿ ಕ್ರೇನ್ ಮೂಲಕ ಲಾರಿಯನ್ನು ಮನೆಯಂಗಳದಿಂದ ಮೇಲಕ್ಕೆತ್ತಿ ಸ್ಥಳಾಂತರಿಸಲಾಯಿತು.




