ಪುತ್ತೂರು: ಕಣಿಯೂರು ಗ್ರಾಮದ ಅಡೆಂಜದಲ್ಲಿ ಪತ್ತೆಯಾದ ನಕಲಿ ನೋಟು ಮುದ್ರಣ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿರುವ ಆರೋಪಿ ಅಬ್ದುಲ್ ಶಕೀಲ್ ಹಾಗೂ ಬಂಧಿತ ಆರೋಪಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸಂದೀಪ್ ಪುಂಡಲೀಕ್ ಶೋಳಂಬಿ ವಾಸವಾಗಿದ್ದ ಪಿಲಿಚಂಡಿಕಲ್ಲಿನ ಬಾಡಿಗೆ ಮನೆಯಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಪ್ರಿಂಟರ್, ರಾಸಾಯನಿಕ ದ್ರಾವಣವಿದ್ದ ಬಾಟಲಿಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಜುಲೈ 16ರಂದು ಕಣಿಯೂರು ಗ್ರಾಮದ ಅಡೆಂಜದಲ್ಲಿರುವ ಇದ್ರೀಸ್ ಎಂಬುವರಿಗೆ ಸೇರಿದ ಮನೆಯಲ್ಲಿ ನಕಲಿ ನೋಟುಗಳನ್ನು ಮುದ್ರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ನಕಲಿ ಕರೆನ್ಸಿ ನೋಟುಗಳು ಹಾಗೂ ಅವುಗಳನ್ನು ಮುದ್ರಿಸಲು ಬಳಸಲಾಗುತ್ತಿದ್ದ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದರು. ಬಳಿಕ ನಡೆದ ತನಿಖೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಬೆಳಕಿಗೆ ಬಂದಿದೆ.ಈ ಪ್ರಕರಣದಲ್ಲಿ ಇದುವರೆಗೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪುತ್ತೂರು ಕಸಬಾ ಗ್ರಾಮದ ಇಬ್ರಾಹಿಂ (60), ಕಾಸರಗೋಡು ಜಿಲ್ಲೆಯ ಚಂಗುಲ ಗ್ರಾಮದ ಶರೀಫ್ (51), ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸಂದೀಪ್ ಪುಂಡಲೀಕ ಶೋಳಂಬಿ (30), ಕಾಸರಗೋಡು ಜಿಲ್ಲೆಯ ಆಮೂರು ಗ್ರಾಮದ ನಬಾಸ್ (37), ಒಳಮೊಗ್ರು ಗ್ರಾಮದ ಸಲ್ಮಾನ್ ಫಾರೀಸ್ (25), ಉರುವಾಲು ಗ್ರಾಮದ ಸಿರಾಜುದ್ದೀನ್ (34) ಹಾಗೂ ಪುತ್ತಿಲ ಗ್ರಾಮದ ಇರ್ಷಾದ್ (31) ಎಂದು ಗುರುತಿಸಲಾಗಿದೆ.ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಬಪ್ಪಳಿಗೆ ನಿವಾಸಿ ಇಬ್ರಾಹಿಂ, ಸಂದೀಪ್ ಪುಂಡಲೀಕ ಶೋಳಂಬಿ, ಉರುವಾಲು ಗ್ರಾಮದ ಸಿರಾಜುದ್ದೀನ್ ಹಾಗೂ ಪುತ್ತಿಲದ ಇರ್ಷಾದ್ ಅವರನ್ನು ಆರಂಭದಲ್ಲಿ ಜುಲೈ 26ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಉಳಿದ ಆರೋಪಿಗಳಾದ ಆಮೂರು ಗ್ರಾಮದ ನಬಾಸ್, ಒಳಮೊಗ್ರುವಿನ ಸಲ್ಮಾನ್ ಫಾರಿಸ್ ಹಾಗೂ ಚಂಗುಲ ಗ್ರಾಮದ ಶರೀಫ್ ಅವರನ್ನು ಆಗಸ್ಟ್ 1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಜುಲೈ 26ರಂದು ಪೊಲೀಸ್ ಕಸ್ಟಡಿಯಲ್ಲಿದ್ದ ನಾಲ್ವರು ಆರೋಪಿಗಳನ್ನೂ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.ಇದರ ಮಧ್ಯೆ, ನ್ಯಾಯಾಲಯದ ಅನುಮತಿ ಪಡೆದು ಬೆಳ್ತಂಗಡಿ ಉಪವಿಭಾಗದ ಪೊಲೀಸ್ ಅಧಿಕಾರಿಗಳ ನೇತೃತ್ವದ ತಂಡವು, ತಲೆಮರೆಸಿಕೊಂಡಿರುವ ಆರೋಪಿ ಅಬ್ದುಲ್ ಶಕೀಲ್ ಹಾಗೂ ಸಂದೀಪ್ ಪುಂಡಲೀಕ ಶೋಳಂಬಿ ವಾಸವಾಗಿದ್ದ ಕುವೆಟ್ಟು ಗ್ರಾಮದ ಬಾಡಿಗೆ ಮನೆಯಲ್ಲಿ ಶೋಧ ಕಾರ್ಯ ನಡೆಸಿತು.ಶೋಧ ಕಾರ್ಯದ ವೇಳೆ ಸಂದೀಪ್ ಪುಂಡಲೀಲ ಶೋಳಂಬಿ ಬಳಸುತ್ತಿದ್ದ ಕೊಠಡಿಯಿಂದ ಪ್ರಿಂಟರ್, ರಾಸಾಯನಿಕ ದ್ರಾವಣವಿದ್ದ ಬಾಟಲಿಗಳು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.




