ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡೆಯಲ್ಲಿ ಎಸ್‌ಐಟಿ (SIT) ಅಧಿಕಾರಿಗಳು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಪತ್ತೆಯಾಗಿದ್ದ ಅಸ್ಥಿಪಂಜರಗಳ ಪೈಕಿ ಮೂರು ವ್ಯಕ್ತಿಗಳ ಗುರುತನ್ನು ಎಫ್‌ಎಸ್‌ಎಲ್ (FSL) ಪ್ರಯೋಗಾಲಯವು ಡಿಎನ್‌ಎ ಪರೀಕ್ಷೆಯ ಮೂಲಕ ಅಧಿಕೃತವಾಗಿ ದೃಢಪಡಿಸಿದೆ. ಸೌಜನ್ಯಳ ಮಾವ ವಿಠಲ ಗೌಡ ಅವರು ತೋರಿಸಿದ ಜಾಗದಲ್ಲಿ 2025ರ ಸೆಪ್ಟೆಂಬರ್ 17 ಮತ್ತು 18ರಂದು ಎಸ್‌ಐಟಿ ಕಾರ್ಯಾಚರಣೆ ನಡೆಸಿ ಒಟ್ಟು ಏಳು ಅಸ್ಥಿಪಂಜರಗಳನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿತ್ತು.
ಕಾರ್ಯಾಚರಣೆ ವೇಳೆ ಅಸ್ಥಿಪಂಜರಗಳು ದೊರೆತ ಸ್ಥಳದಲ್ಲೇ ಕೆಲವೊಂದು ಐಡಿ ಕಾರ್ಡ್‌ಗಳು ಕೂಡ ಲಭ್ಯವಾಗಿದ್ದವು. ಈ ಗುರುತಿನ ಚೀಟಿಗಳ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳು ನಾಪತ್ತೆಯಾದವರ ಕುಟುಂಬಸ್ಥರನ್ನು ಪತ್ತೆ ಹಚ್ಚಿದ್ದರು. ಬಳಿಕ ಬೆಳ್ತಂಗಡಿ ನ್ಯಾಯಾಲಯದ ನಿರ್ದೇಶನದಂತೆ ಸಂಬಂಧಿಕರ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿತ್ತು. ಇದೀಗ ಬಂದಿರುವ ವರದಿಯಲ್ಲಿ ಮೂರು ಕುಟುಂಬಗಳ ಡಿಎನ್‌ಎ ಮಾದರಿಯು ಪತ್ತೆಯಾದ ಅಸ್ಥಿಪಂಜರಗಳಿಗೆ ನಿಖರವಾಗಿ ತಾಳೆಯಾಗಿದೆ.
ಡಿಎನ್‌ಎ ವರದಿಯ ಪ್ರಕಾರ ಪತ್ತೆಯಾದ ಮೂವರ ಗುರುತು ಹೀಗಿದೆ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಯು.ಬಿ. ಅಯ್ಯಪ್ಪ (70), ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿಯ ಆದಿಶೇಷ ನಾರಾಯಣ (27), ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿಯ ಕೃಷ್ಣಪ್ಪ (85). ಈ ಮೂವರ ಅಸ್ಥಿಪಂಜರಗಳು ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾಗಿರುವುದು ಈಗ ಪೂರ್ಣವಾಗಿ ದೃಢಪಟ್ಟಂತಾಗಿದೆ.
ನಾಪತ್ತೆಯಾದ ಹಿನ್ನೆಲೆಯನ್ನು ಪರಿಶೀಲಿಸಿದಾಗ, ಕೊಡಗಿನ ಯು.ಬಿ. ಅಯ್ಯಪ್ಪ ಅವರು 2017ರ ಜೂನ್ 25ರಂದು ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿ ನಾಪತ್ತೆಯಾಗಿದ್ದರು. ಈ ಸಂಬಂಧ ಕುಟ್ಟ ವೃತ್ತದ ಶ್ರೀಮಂಗಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇನ್ನು ತುಮಕೂರಿನ ಆದಿಶೇಷ ನಾರಾಯಣ ಎಂಬ ಯುವಕ ಬೆಂಗಳೂರಿನ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದು, 2013ರ ಅಕ್ಟೋಬರ್ 2ರಂದು ಮನೆಗೆ ಬಂದು ಮೊಬೈಲ್ ಬಿಟ್ಟು ನಾಪತ್ತೆಯಾಗಿದ್ದ. ಆತ ಆಗಾಗ ಮನೆಯಿಂದ ಹೋಗಿ ಬರುವ ಅಭ್ಯಾಸ ಹೊಂದಿದ್ದರಿಂದ ಕುಟುಂಬದವರು ದೂರು ನೀಡಿರಲಿಲ್ಲ.




