ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಪ್ರಭಾವಿ ಹುದ್ದೆಗಳಿಗಾಗಿ ನಡೆಯುವ ರಾಜಕೀಯ ಶಿಫಾರಸು ಹಾಗೂ ಲಾಬಿಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಪೊಲೀಸ್ ಇನ್ಸ್ಪೆಕ್ಟರ್ (PI) ಮತ್ತು ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (DySP) ಹುದ್ದೆಗಳ ವರ್ಗಾವಣೆ ನಿಯಮಾವಳಿಗಳನ್ನು ಗೃಹ ಇಲಾಖೆ ಪರಿಷ್ಕರಿಸಿದ್ದು, ಕಡ್ಡಾಯ ಐದು ವರ್ಷಗಳ ಕೂಲಿಂಗ್-ಆಫ್ ಅವಧಿ (Cooling-off period) ನಿಯಮವನ್ನು ಜಾರಿಗೆ ತಂದಿದೆ.
ಹೊಸ ಮಾರ್ಗಸೂಚಿಯ ಪ್ರಕಾರ, ಬಡ್ತಿ ಪಡೆದ ಡಿವೈಎಸ್ಪಿಗಳು ಕಾರ್ಯನಿರ್ವಾಹಕ ಹುದ್ದೆಗೆ (Executive Posting) ಅರ್ಹರಾಗಲು ಮೊದಲು ಕಾರ್ಯನಿರ್ವಾಹಕೇತರ (Non-Executive) ಹುದ್ದೆಯಲ್ಲಿ ಕನಿಷ್ಠ ಎರಡು ವರ್ಷ ಸೇವೆ ಸಲ್ಲಿಸಿರಬೇಕು.
ಇದೇ ರೀತಿ, ಬಡ್ತಿ ಪಡೆದ ಪೊಲೀಸ್ ಇನ್ಸ್ಪೆಕ್ಟರ್ಗಳು ಕೂಡ ಕಾರ್ಯನಿರ್ವಾಹಕೇತರ ಜವಾಬ್ದಾರಿಗಳಲ್ಲಿ ಎರಡು ವರ್ಷ ಪೂರ್ಣಗೊಳಿಸಿದ ಬಳಿಕವೇ ಕಾರ್ಯನಿರ್ವಾಹಕ ಹುದ್ದೆಗೆ ನೇಮಕವಾಗಲು ಅರ್ಹರಾಗುತ್ತಾರೆ.
ಇದರ ಜೊತೆಗೆ, ಬಡ್ತಿ ಪಡೆದ ಅಧಿಕಾರಿಗಳು ಎರಡು ವರ್ಷದೊಳಗೆ ನಾಲ್ಕು ವಾರಗಳ ಪುನರ್ತರಬೇತಿ (Refresher Training) ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ತರಬೇತಿಯನ್ನು ಪೂರ್ಣಗೊಳಿಸದ ಅಧಿಕಾರಿಗಳಿಗೆ ಕಾರ್ಯನಿರ್ವಾಹಕ ಹುದ್ದೆ ನೀಡುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.




