ಸಂದೀಪ್ ಬೆದ್ರ ನಿರ್ದೇಶನದ ಗೋಲ್ಡನ್ ಮೂವೀಸ್ ಬ್ಯಾನರ್‌ನ ತುಳು- ಕನ್ನಡ ದ್ವಿಭಾಷಾ ಸಿನಿಮಾ ‘ಪಿಚ್ಚರ್’ ಆಗಸ್ಟ್ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಚಿತ್ರ ತಂಡವು ಈ ಕುರಿತು ಮಾಹಿತಿಯನ್ನು ನೀಡಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ, ತುಳು ಭಾಷೆ ಹಾಗೂ ಕರಾವಳಿಯ ಸಂಸ್ಕೃತಿಯ ಮೇಲಿನ ಅಭಿಮಾನದಿಂದ ಈ ಚಿತ್ರವನ್ನು ನಿರ್ಮಿಸಿದ್ದು, ಹೊಸ ಪ್ರತಿಭೆಗಳ ಜೊತೆಗೆ ಹಿರಿಯ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಒಂದು ಗೂಡಿಸಿರುವುದು ಚಿತ್ರದ ವಿಶೇಷತೆಯಾಗಿದೆ ಎಂದು ಹೇಳಿದರು. ಚಿತ್ರದ ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ಮಾತನಾಡಿ ಕಾಮಿಡಿ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪುತ್ತೂರು ಮತ್ತು ಉಡುಪಿಯಲ್ಲಿ ನಡೆದ ಪ್ರೀಮಿಯರ್ ಪ್ರದರ್ಶನಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತುಳು ಚಿತ್ರರಂಗದ ಹಿರಿಯ ಕಲಾವಿದರು ಮತ್ತು ತಾಂತ್ರಿಕ ತಂಡದ ಸಹಕಾರದಿಂದ ಉತ್ತಮ ಗುಣ ಮಟ್ಟದಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ ಎಂದರು.

ಹಿರಿಯ ನಟ ದೇವದಾಸ್ ಕಾಪಿಕಾಡ್ ಮಾತನಾಡಿ, ‘ಪಿಚ್ಚರ್’ ತುಳು ಚಿತ್ರರಂಗಕ್ಕೆ ಮತ್ತೊಂದು ಉತ್ತಮ ಕೊಡುಗೆಯಾಗಲಿದ್ದು, ನಾಯಕ ನಟ ನಿತ್ಯಪ್ರಕಾಶ್ ಬಂಟ್ವಾಳ್ ಅವರ ಅಭಿನಯ ಪ್ರೇಕ್ಷಕರ ಗಮನ ಸೆಳೆಯಲಿದೆ ಎಂಬ ವಿಶ್ವಾಸವಿದೆ ಎಂದರು. ಪಿಚ್ಚರ್ ಚಿತ್ರದಲ್ಲಿ ನಿತ್ಯಪ್ರಕಾಶ್ ಬಂಟ್ವಾಳ್ ಮತ್ತು ಅಮೃತಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ಪುಷ್ಪರಾಜ್ ಬೊಳ್ಳಾರ್ ಹಾಗೂ ಅರ್ಜುನ್ ಕಾಪಿಕಾಡ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಸಂತೋಷ್ ರೈ ಹಾಗೂ ಚಂದ್ರಶೇಖರ್ ಕೆ.ಎಸ್. ಛಾಯಾಗ್ರಹಣ ನೀಡಿದ್ದು, ಸ್ಯಾಮ್ಯುಯೆಲ್ ಅಬಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಾಯಕ ನಿತ್ಯಪ್ರಕಾಶ್ ಬಂಟ್ವಾಳ್, ನಾಯಕಿ ಅಮೃತಾ, ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು, ಅರ್ಜುನ್ ಕಾಪಿಕಾಡ್, ಸ್ಯಾಮ್ಯುಯೆಲ್ ಅಬಿ ಸೇರಿದಂತೆ ಚಿತ್ರತಂಡದ ಸದಸ್ಯರು ಇದ್ದರು.




