ಉಡುಪಿ ನಗರದ ರಸ್ತೆಗಳ ಅವ್ಯವಸ್ಥೆ ವಿರುದ್ದ ಸಾಮಾಜಿಕ ಕಾರ್ಯಕರ್ತರೊಬ್ಬರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಹೊಂಡ ಗುಂಡಿಗಳಿರುವ ರಸ್ತೆಯಲ್ಲಿ ಉರುಳು ಸೇವೆ ಮಾಡುವ ಮೂಲಕ ಜನಪ್ರತಿನಿಧಿಗಳ ಗಮನಸೆಳೆಯುವ ಕೆಲಸಕ್ಕೆ ಮುಂದಾಗಿದ್ದಾರೆ.
ಉಡುಪಿ ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಇಂದ್ರಾಳಿ ಬ್ರಿಡ್ಜ್ ಬಳಿಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಹೊಂಡ ಗುಂಡಿಗಳಿಂದ ಕೂಡಿದೆ ಈ ಹಿನ್ನಲೆ ರಸ್ತೆಯ ಅವ್ಯವಸ್ಥೆ ಯನ್ನು ಖಂಡಿಸಿ ಇಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಅವರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಇಂದ್ರಾಳಿ ಬ್ರಿಡ್ಜ್ ನ ಹೊಂಡ ಗುಂಡಿ ರಸ್ತೆಗೆ ಆರತಿ ಎತ್ತಿ, ತೆಂಗಿನಕಾಯಿ ಒಡೆದು ರಸ್ತೆ ಮೇಲೆ ಉರುಳು ಸೇವೆ ಮಾಡುವ ಮೂಲಕ ನಿತ್ಯಾನಂದ ಒಳಕಾಡು ರವರು ವಿಶಿಷ್ಟವಾಗಿ ಪ್ರತಿಭಟಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ನಿತ್ಯಾನಂದ ಒಳಕಾಡು ಅವರು “ಈ ರಸ್ತೆ ಗೆ ಟೆಂಡರ್ ಆಗಿ ಮೂರು ವರ್ಷಗಳಿಂದ ರಸ್ತೆ ಹಾಳಾದರೂ ಯಾರೂ ಪ್ರಶ್ಬೆ ಮಾಡುತ್ತಿಲ್ಲ. ಪ್ರತಿನಿತ್ಯ ಸಾವಿರಾರು ಜನರು ಈ ರಸ್ತೆಯಲ್ಲಿ ಸಂಚಾರ ನಡೆಸುತ್ತಾರೆ. ಸ್ವತಹ ಮುಖ್ಯಮಂತ್ರಿಗಳೇ ಈ ರಸ್ತೆಯಲ್ಲಿ ಸಂಚಾರ ಮಾಡಿದರೂ ಕೂಡಾ ಅವರ ಕಣ್ಣಿಗೂ ಈ ರಸ್ತೆಯ ಸಮಸ್ಯೆ ಕಂಡು ಬಂದಿಲ್ಲ. ಇಲ್ಲಿನ ಹೊಂಡ ಗಳನ್ನು ರಿಪೇರಿ ಮಾಡಲು ಸ್ವತಹ ಮೋದಿ ಮತ್ತು ನಿತಿನ್ ಗಡ್ಕರಿ ಬರಬೇಕಾದ ಅನಿವಾರ್ಯತೆ ಇದೆ. ಉಡುಪಿ ಜನರು ಮುಗ್ದರು, ಯಾರೂ ಪ್ರಶ್ನೆ ಮಾಡುವುದಿಲ್ಲ. ಮಾನ್ಯ ಪ್ರಧಾನ ಮಂತ್ರಿಗಳು ಉಡುಪಿಗೆ ಬಂದು ಜನರ ಸಮಸ್ಯೆ ಬಗೆಹರಿಸಲಿ ಎಂದರು.