ಪುತ್ತೂರು: ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕಾಲೇಜು ವಿದ್ಯಾರ್ಥಿಯೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಶನಿವಾರ ಅಪರಾಹ್ನ ನಡೆದಿದೆ.
ಆರ್ಯಾಪು ಗ್ರಾಮದ ಕುಂಜೂರುಪಂಜ ನಿವಾಸಿ ರಮೇಶ್ ರೈ ಮತ್ತು ಯಶೋಧಾ ದಂಪತಿಯ ಪುತ್ರ ಶಮಿಕ್ ರೈ (20) ಮೃತಪಟ್ಟ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಶಮಿಕ್ ಅವರು ಪುತ್ತೂರಿನ ಖಾಸಗಿ ಕಾಲೇಜ್‌ನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಜೊತೆಗೆ ಸಿಎ ಪರೀಕ್ಷೆಗೂ ಸಿದ್ಧತೆ ನಡೆಸುತ್ತಿದ್ದರು. ಕಳೆದ ಹಲವು ಸಮಯದಿಂದ ಶಮಿಕ್ ಜಿಮ್‌ಗೆ ಹೋಗುತ್ತಿದ್ದು, ಎಂದಿನಂತೆ ಶನಿವಾರವೂ ಜಿಮ್‌ಗೆ ತೆರಳಿದ್ದು ಅಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದು ತಕ್ಷಣವೇ ಆತನನ್ನು ಪುತ್ತೂರಿನ ಆಸ್ಪತ್ರೆಗೆ ಸಾಗಿಸಿದ್ದು, ಆ ವೇಳೆಗಾಗಲೇ ಆತ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.
ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪುತ್ತೂರು ನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತರು ತಂದೆ, ತಾಯಿ. ಓರ್ವ ಸಹೋದರಿ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.




