ಮುಲ್ಕಿ: ಕಿಲ್ಪಾಡಿಯ ಪ್ರಸಿದ್ಧ ಕೋರ್ದಬ್ಬು ದೈವಸ್ಥಾನದಲ್ಲಿ ನಡೆದ ಸುಮಾರು ₹36 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ಕಳವು ಪ್ರಕರಣವನ್ನು ಮೂಲ್ಕಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಪಡುಬಿದ್ರೆ ಕಂಚಿನಡ್ಕದ ಜಾಹಿದ್ ಸಿನಾನ್, ಕಾರ್ನಾಡ್ ನಿವಾಸಿ ಯಾಸಿನ್ ಹಾಗೂ ದಾವಣಗೆರೆಯ ಅಬ್ದುಲ್ ಜುಮಾಲ್ ಮತ್ತು ಮಹಮ್ಮದ್ ಆಫ್ರಿದ್ ಎಂದು ಗುರುತಿಸಲಾಗಿದೆ.
ದೈವಸ್ಥಾನದಲ್ಲಿ ಯಾರೂ ಇಲ್ಲದ ಸಮಯವನ್ನು ಗಮನಿಸಿ ಪೂರ್ವಯೋಜಿತವಾಗಿ ಕಳ್ಳತನ ನಡೆಸಲಾಗಿತ್ತು ಎನ್ನಲಾಗಿದ್ದು, ದೈವದ ಕಡಸಾಲೆ ಸೇರಿದಂತೆ ಸುಮಾರು ₹36 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕಳವು ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣದ ತನಿಖೆ ಮುಂದುವರಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಶೋಧ ನಡೆಸುತ್ತಿದ್ದಾರೆ




