ಮಂಗಳೂರು: ಸರಕಾರಿ ಲೇಡಿಗೋಷನ್ ಆಸ್ಪತ್ರೆ ಗೆ ಸಮಾಜ ಸೇವಾ ಚಿಂತಕ ಗೆಳೆಯರ ಬಳಗವಾದ ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುದ್ಧೀಕೃತ ಜಲ ಪೂರಣ ಉಪಕರಣವನ್ನು ಉದಾರ ಕೊಡುಗೆಯಾಗಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನೀಡಲಾಯಿತು.ಆರೋಗ್ಯ ಸೇವೆಯನ್ನು ಅರಸಿ ಬರುವ ಪ್ರತಿಯೊಬ್ಬ ಫಲಾನುಭವಿ ಮಹಿಳೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬಾರದು ಎಂಬ ಮಹೋನ್ನತ ಉದ್ದೇಶವನ್ನು ಇಟ್ಟುಕೊಂಡು ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಈ ಕೊಡುಗೆಯನ್ನು ನೀಡಿದೆ ಎಂದು ಟ್ರಸ್ಟ್ ಅಧ್ಯಕ್ಷರಾದ ಶಮೀಮ್ ಕುಟ್ಟಿಕಳ ಅವರು ಹೇಳಿದರು.
ಪ್ರಚಾರ ಬಯಸದೆ ಬಹಳಷ್ಟು ವರುಷಗಳಿಂದ ಸಾರ್ವಜನಿಕ ದೇಣಿಗೆಯನ್ನು ಸಂಗ್ರಹಿಸದೆ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಈ ಸಂಸ್ಥೆಯ ಸರ್ವ ಸದಸ್ಯರ ಸೇವಾ ಮನೋಭಾವ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.ಅಧ್ಯಕ್ಷತೆ ವಹಿಸಿ ಮಾತನಾಡಿದ ವೈದ್ಯಕೀಯ ಅಧೀಕ್ಷಕರಾದ ಡಾ/ದುರ್ಗಾಪ್ರಸಾದ್.ಎಂ.ಆರ್.ಅವರು ಮಾತನಾಡಿ ಇಂಥಹ ಕ್ರಿಯಾತ್ಮಕ ಚಿಂತನಾತ್ಮಕ ಶೈಲಿಯ ಕೊಡುಗೆಗಳು ಮಹಿಳೆಯರ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಮಹತ್ತರ ಪಾತ್ರವನ್ನು ವಹಿಸುವುದರಲ್ಲಿ ಸಂದೇಹವೇ ಇಲ್ಲ ಎಂದರು.ಸೋಂಕುರಹಿತ ಪರಿಶುದ್ಧ ನೀರು ಸದೃಢತೆ,ಸಬಲ ದೈಹಿಕ ಸಾಮರ್ಥ್ಯವನ್ನು ಮಹಿಳೆಗೆ ನೀಡಿ ಅವಳಲ್ಲಿ ಆತ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಹನೀಫ್ ಸಾಲೆತ್ತೂರು ,ಶ್ರೀ.ಶಕೀಲ್ ಹೈದರ್ ,ಹಬೀಬ್ ಉಳಾಯಿಬೆಟ್ಟು,ರಶೀದ್ ಗಡಿಯಾರ್ ಹಾಗೂ ಟ್ರಸ್ಟ್ ನ ಸರ್ವ ಸದಸ್ಯರು ಹಾಜರಿದ್ದರು.ಲೇಡಿಗೋಶನ್ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಅಳವಡಿಸಲಾದ ಸುಮಾರು ಎಂಬತ್ತು ಲೀಟರ್ ಸಾಮರ್ಥ್ಯದ ತ್ರೀ ಇನ್ ಒನ್ ಶುದ್ಧೀಕೃತ ಜಲ ಮರುಪೂರಣ ಉಪಕರಣವನ್ನು ಸಾರ್ವಜನಿಕ ಉಪಯೋಗಕ್ಕಾಗಿ ಸಮರ್ಪಿಸಲಾಯಿತು.
ವಿನೂತನವಾಗಿ ಡಿಜಿಟಲ್ ಮಾದರಿಯಲ್ಲಿ ಉಪಕರಣವನ್ನು ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ವತಿಯಿಂದ ಅಧ್ಯಕ್ಷರು ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಹಸ್ತಾಂತರಿಸಿದರು.ನಿವಾಸಿ ವೈದ್ಯಾಧಿಕಾರಿ ಡಾ/ಜಗದೀಶ್ ಅವರು ಶುಭಾಶಂಸನೆಗೈದರು.ಹಿರಿಯ ತಜ್ಞರಾದ ಡಾ/ದಯಾನಂದ್,ಶುಶ್ರೂಧೀಕ್ಷಕರಾದ ಶ್ರೀಮತಿ ಗೀತಾ,ನರ್ಸಿಂಗ್ ಸುಪರ್ ವೈಸರ್ ಶ್ರೀಮತಿ ಮಲ್ಲಿಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶುಶ್ರೂಷಾಧಿಕಾರಿ ಶ್ರೀಮತಿ ಸವಿತಾ ಇವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಶ್ರೀ.ಹೇಮಂತ್ ಮತ್ತು ಶ್ರೀಮತಿ ಭವ್ಯಾ ತಾಂತ್ರಿಕವಾಗಿ ಸಹಕರಿಸಿದರು.




