ಮಂಗಳೂರು: ನಗರದ ಬಂಟ್ಸ್ ಹಾಸ್ಟೆಲ್ ಜಂಕ್ಷನ್‌ನಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ, ತಾನು ಮಾಧ್ಯಮದವನು ಎಂದು ಸುಳ್ಳು ಹೇಳಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ವರದಿಯಾಗಿದೆ.
ಅಲ್ಲದೆ, ಈ ಸಂಪೂರ್ಣ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ ಅಪರಿಚಿತ ವ್ಯಕ್ತಿಯ ವಿರುದ್ಧ ಮಂಗಳೂರು ಸಂಚಾರ ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 9ರಂದು ಬೆಳಿಗ್ಗೆ 10:50 ರ ಸುಮಾರಿಗೆ ಬಂಟ್ಸ್ ಹಾಸ್ಟೆಲ್ ಬಳಿ ಸಂಚಾರ ಪೂರ್ವ ಠಾಣೆಯ ಸಿಪಿಸಿ ಅಭಿಷೇಕ್ ಬಿ. ಜಿ. ಹಾಗೂ ಸಿಎಚ್‌ಸಿ ಶಂಕರಪ್ಪ ಅವರು ಕರ್ತವ್ಯದಲ್ಲಿದ್ದರು. ಈ ವೇಳೆ ಪಿವಿಎಸ್ ಕಡೆಯಿಂದ ಬಂದ ‘KA 19 EP 2541’ ನೋಂದಣಿ ಸಂಖ್ಯೆಯ ಆಕ್ಟಿವಾ ದ್ವಿಚಕ್ರ ವಾಹನದ ನಂಬರ್ ಪ್ಲೇಟ್‌ನ ಕೊನೆಯ ಸಂಖ್ಯೆಗೆ ಸ್ಟಿಕ್ಕರ್ ಅಂಟಿಸಿರುವುದು ಕಂಡುಬಂದಿದೆ.
ಪೋಲೀಸ್ ಸಿಬ್ಬಂದಿ ವಾಹನ ತಡೆದು ಫೋಟೋ ತೆಗೆಯಲು ಯತ್ನಿಸಿದಾಗ, ಸವಾರನು “ಫೋಟೋ ಯಾಕೆ ತೆಗೆಯುತ್ತೀರಿ?” ಎಂದು ಜೋರು ಧ್ವನಿಯಲ್ಲಿ ತಕರಾರು ತೆಗೆದಿದ್ದಾನೆ. ಈ ವೇಳೆ “ಜೋರು ಮಾತನಾಡಬೇಡ” ಎಂದು ಸಿಬ್ಬಂದಿ ಸೂಚಿಸಿದ್ದಾರೆ.
“ನಾನು ಮೀಡಿಯಾದವನು” ಎಂದು ಕರ್ತವ್ಯಕ್ಕೆ ಅಡ್ಡಿ: ಅಷ್ಟರಲ್ಲೇ ಮಧ್ಯಪ್ರವೇಶಿಸಿದ ಅಪರಿಚಿತ ವ್ಯಕ್ತಿಯೊಬ್ಬ, “ಯಾಕೆ ಅವಾಚ್ಯ ಶಬ್ದದಿಂದ ಬೈಯ್ಯುತ್ತಿದ್ದೀರಿ? ನಾನು ಮೀಡಿಯಾದವನು, ನಿಮ್ಮ ವಿಡಿಯೋ ಮಾಡಿ ವೈರಲ್ ಮಾಡುತ್ತೇನೆ” ಎಂದು ಹೆದರಿಸಿದ್ದಾನೆ. ಅಲ್ಲದೆ, “ನಿನ್ನ ಕ್ಯಾಪ್ ಎಲ್ಲಿ?, ನಮ್ಮ ಟ್ಯಾಕ್ಸ್ ನಿಂದ ನೀವು ಬದುಕುವುದು” ಎಂದು ಏರುಧ್ವನಿಯಲ್ಲಿ ಮಾತನಾಡುತ್ತಾ, ಸುಮಾರು 15 ನಿಮಿಷಗಳ ಕಾಲ ಸಂಚಾರ ನಿಯಂತ್ರಣ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಸ್ಥಳಕ್ಕೆ ಎಎಸ್‌ಐ ಜಗದೀಶ ಹಾಗೂ ಸಿಪಿಸಿ ಪ್ರವೀಣ್ ಧಾವಿಸುತ್ತಿದ್ದಂತೆ ಆರೋಪಿಯು ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್: ತರುವಾಯ ಆರೋಪಿಯು ತಾನು ಚಿತ್ರೀಕರಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು, ಪೊಲೀಸ್ ಇಲಾಖೆ ಹಾಗೂ ಕರ್ತವ್ಯನಿರತ ಸಿಬ್ಬಂದಿಯ ವಿರುದ್ಧ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿಸುವಂತೆ ಅಪಪ್ರಚಾರ ಮಾಡಿದ್ದಾನೆ. ಸಾರ್ವಜನಿಕ ಸೇವಕನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಇಲಾಖೆಯ ತೇಜೋವಧೆಗೆ ಯತ್ನಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ಕದ್ರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.




