ಉಡುಪಿ: ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ತಂದೆ ಮಗನಿಗೆ ಢಿಕ್ಕಿಯಾಗಿ ತಂದೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಲಾರಿಯನ್ನು ಪತ್ತೆ ಮಾಡಲಾಗಿದೆ.
ಕಾಪು ಸರ್ಕಲ್ ಇನ್ಸ್‌ಪೆಕ್ಟರ್ ಪೂವಯ್ಯ ಹಾಗೂ ಪಡುಬಿದ್ರಿ ಎಸ್.ಐ ಪುರುಷೋತ್ತಮ ತಂಡದ ತ್ವರಿತ ಕಾರ್ಯಚರಣೆಯಿಂದ ಮೂಡಬಿದ್ರೆ ಬಳಿ ತಡೆದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿಯಿಂದ ಬಸ್ಸಿನಲ್ಲಿ ಬಂದು ಬಸ್ಸಿಳಿದು ರಸ್ತೆ ಬದಿಯಲ್ಲಿ ನಿಂತಿದ್ದ ತಂದೆ ಮಗನಿಗೆ ಢಿಕ್ಕಿಯಾದ ಪರಿಣಾಮ ತಂದೆಯ ದೇಹ ಲಾರಿಯಡಿಗೆ ಬಿದ್ದು ಛಿದ್ರಗೊಂಡರೆ, ಮಗ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.
ಲಾರಿ ಮಹಾರಾಷ್ಟ್ರದ ಸೂರತ್‌ನಿಂದಲೂ 120 ಕೀ.ಮೀ.ದೂರದಿಂದ ಪ್ಲಾಸ್ಟಿಕ್ ಸಲಕರಣೆ ಮಾಡುವ ಕಚ್ಚಾವಸ್ತುಗಳನ್ನು ಹೇರಿಕೊಂಡು ಮೂಡಬಿದಿರೆ ಸಮೀಪದ ಗಂಜಿಮಠ ಎಂಬಲ್ಲಿನ ಫ್ಯಾಕ್ಟರಿಗೆ ಕಳೆದ ಮೂರು ದಿನಗಳ ಹಿಂದೆ ಹೊರಟಿತ್ತು.
ಬುಧವಾರ ಮುಂಜಾನೆ ಆರರ ಸುಮಾರಿಗೆ ಉಚ್ಚಿಲ ಬಳಿ ಬರುತ್ತಿದ್ದಂತೆ ಚಾಲಕನ ನಿದ್ದೆಯ ಮಂಪರಿನಿಂದಾಗಿ ಲಾರಿ ರಸ್ತೆ ಬಿಟ್ಟು, ರಸ್ತೆ ಪಕ್ಕದಲ್ಲಿ ನಿಂತಿದ್ದ ತಂದೆ ಮಗನಿಗೆ ಢಿಕ್ಕಿಯಾಗಿ ಪರಾರಿಯಾಗಿತ್ತು.