ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡಿನ ಮಾಲೋತ್‌ನಲ್ಲಿ ದಂಪತಿ ತಮ್ಮದೇ ಮನೆಯ ಆವರಣದಲ್ಲಿರುವ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾದ ಘಟನೆ ಶುಕ್ರವಾರ ನಡೆದಿದೆ.
ಮೃತರನ್ನು ಕಾರ್ಯಾಟ್ಟುಚಾಲ್‌ನ ತಡತ್ತಿಲ್ ನಿವಾಸಿ ಸಾಬು (56) ಮತ್ತು ಅವರ ಪತ್ನಿ ಸಜಿ ಸಾಬು (52) ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಹೊಂಡದಲ್ಲಿ ದಂಪತಿ ಮೃತದೇಹಗಳು ಪತ್ತೆಯಾಗಿವೆ.ಲಭ್ಯವಾಗಿರುವ ಮಾಹಿತಿಯ ಪ್ರಕಾರ, ದಂಪತಿ ಕೃಷಿ ಕೆಲಸಕ್ಕಾಗಿ ತಮ್ಮ ತೋಟಕ್ಕೆ ತೆರಳಿದ್ದರು. ಆದರೆ ಸಂಜೆ ವೇಳೆಯಾದರೂ ಅವರು ಮನೆಗೆ ಮರಳದ ಹಿನ್ನೆಲೆಯಲ್ಲಿ ಆತಂಕಗೊಂಡ ಅವರ ಪುತ್ರ ಮೆಲ್ವಿನ್ ಹುಡುಕಿಕೊಂಡು ಹೋದಾಗ ತೋಟದ ಕೃಷಿ ಹೊಂಡದಲ್ಲಿ ಇಬ್ಬರ ಶವಗಳು ತೇಲುತ್ತಿರುವುದು ಕಂಡುಬಂದಿದೆ.
ಸ್ಥಳೀಯರಿಂದ ಮಾಹಿತಿ ಪಡೆದ ವೆಳ್ಳರಿಕುಂಡು ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮಹಜರು ಸೇರಿದಂತೆ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದರು. ದಂಪತಿಯ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಕುರಿತು ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




