ಉಡುಪಿ : ಬಸ್ ಟೈಮಿಂಗ್ಸ್ ವಿಚಾರವಾಗಿ ಉಡುಪಿ ನಗರದ ಮೂಡನಿಡಂಬೂರು ಗ್ರಾಮದ ಸರ್ವಿಸ್ ಬಸ್ ನಿಲ್ದಾಣದಲ್ಲಿ ಎರಡು ಖಾಸಗಿ ಬಸ್ಸುಗಳನ್ನು ಅಡ್ಡವಾಗಿ ನಿಲ್ಲಿಸಿ, ಸಾರ್ವಜನಿಕ ಸ್ಥಳದಲ್ಲಿ ಕೈ-ಕೈ ಮಿಲಾಯಿಸಿ ಗಲಾಟೆ ನಡೆಸುತ್ತಿದ್ದ ಇಬ್ಬರು ಬಸ್ ಕಂಡಕ್ಟರ್‌ಗಳ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾನುವಾರ ಸೆಪ್ಟೆಂಬರ್ 20 ಉಡುಪಿ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಅಬ್ದುಲ್ ಬಶೀರ್ ಅವರಿಗೆ ಬಂದ ಮಾಹಿತಿಯಂತೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಬಸ್ ನಿಲ್ದಾಣದೊಳಗೆ ಪ್ರಯಾಣಿಕರು ಸಂಚರಿಸುವ ಜಾಗದಲ್ಲೇ ಎರಡು ಖಾಸಗಿ ಬಸ್ಸುಗಳನ್ನು ಅಡ್ಡಲಾಗಿ ನಿಲ್ಲಿಸಿದ್ದ ಕಂಡಕ್ಟರ್‌ಗಳು, ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ ದೂಡಾಡುತ್ತಿದ್ದರು. ಇದರಿಂದಾಗಿ ಸ್ಥಳದಲ್ಲಿದ್ದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದ್ದಲ್ಲದೆ, ಭಯ ಹಾಗೂ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳಕ್ಕೆ ಆಗಮಿಸಿದ ಸಮವಸ್ತ್ರಧಾರಿ ಪೊಲೀಸರು ಗಲಾಟೆ ಮಾಡದಂತೆ ಬುದ್ಧಿವಾದ ಹೇಳಿದರೂ ಲೆಕ್ಕಿಸದ ಆರೋಪಿಗಳು, ಪೊಲೀಸರ ಎದುರಲ್ಲೇ ಕೈ-ಕೈ ಮಿಲಾಯಿಸಿ ಹೊಡೆದಾಟಕ್ಕೆ ಮುಂದಾಗಿದ್ದಾರೆ. ತಕ್ಷಣವೇ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಪೋಲಿಸರು ನಡೆಸಿದ ವಿಚಾರಣೆ ವೇಳೆ ಆರೋಪಿಗಳ ಗುರುತು ಪತ್ತೆಯಾಗಿದೆ. ‘ನವದುರ್ಗಾ’ ಬಸ್ ಕಂಡಕ್ಟರ್ ಮೊಹಮ್ಮದ್ ಮುಝಮ್ಮಿಲ್ (21) ಹಾಗೂ ‘ಶ್ರೀ ದುರ್ಗಾಂಬ’ ಬಸ್ ಕಂಡಕ್ಟರ್ ಅಬ್ದುಲ್ ಹಮೀದ್ (50) ಎಂದು ತಿಳಿದುಬಂದಿದೆ.
ಬಸ್ ಹೊರಡುವ ಸಮಯದ (ಟೈಮಿಂಗ್ಸ್) ಕುರಿತು ಇಬ್ಬರ ನಡುವೆ ಶುರುವಾದ ಕ್ಷುಲ್ಲಕ ತಕರಾರು ವಿಕೋಪಕ್ಕೆ ತಿರುಗಿ ಈ ಗಲಾಟೆ ನಡೆದಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 129/2026, ಭಾರತೀಯ ನ್ಯಾಯ ಸಂಹಿತೆ (BNS) ಕಲಂ: 194(2) ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.




