ಕುಂದಾಪುರ: ಕೋಟೇಶ್ವರದ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿ (CEO) ಕರ್ತವ್ಯ ನಿರ್ವಹಿಸುತ್ತಿದ್ದ ಕಟ್ಬೆಲ್ತೂರು ನಿವಾಸಿ ರಾಘವೇಂದ್ರ ಜೋಗಿ (48) ಅವರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ಮೃತರ ಸಹೋದರ ರಾಜೇಶ್ ಜೋಗಿ (42) ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಟ್ಬೆಲ್ತೂರು ಗ್ರಾಮದ ನಿವಾಸಿಯಾಗಿದ್ದ ರಾಘವೇಂದ್ರ ಜೋಗಿ ಅವರು ಕಳೆದ 18 ವರ್ಷಗಳಿಂದ ಕೋಟೇಶ್ವರದ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸೆಪ್ಟೆಂಬರ್ 24 ರಂದು ಮಧ್ಯಾಹ್ನ ಸುಮಾರು 12:30 ರ ವೇಳೆಗೆ ರಾಘವೇಂದ್ರ ಜೋಗಿ ಅವರು ಮನೆಯ ಸಮೀಪ ಮರಕ್ಕೆ ನೇಣು ಬಿಗಿದುಕೊಂಡಿರುವುದನ್ನು ಕುಟುಂಬಸ್ಥರು ಗಮನಿಸಿದ್ದಾರೆ.
ಕೂಡಲೇ ಸ್ಥಳೀಯರು ಅವರನ್ನು ಕುಂದಾಪುರದ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಮಧ್ಯಾಹ್ನ 1:19 ರ ವೇಳೆಗೆ ರಾಘವೇಂದ್ರ ಜೋಗಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಘಟನೆ ನಡೆದ ಬಳಿಕ ಮೃತರ ಮನೆಯನ್ನು ಪರಿಶೀಲಿಸಿದಾಗ ಡೆತ್ ನೋಟ್ (Death Note) ಒಂದೇ ಸಿಕ್ಕಿದ್ದು, ಅದರಲ್ಲಿ ‘ತನ್ನ ಸಾವಿಗೆ ತಾನೇ ಕಾರಣ’ ಎಂದು ಬರೆದಿಡಲಾಗಿದೆ. ಯಾವುದೋ ವೈಯಕ್ತಿಕ ಸಮಸ್ಯೆಯಿಂದ ಅಥವಾ ಇತರ ವಿಚಾರಗಳಿಂದ ತೀವ್ರ ಮನನೊಂದು ಸೆಪ್ಟೆಂಬರ್ 24 ರ ಬೆಳಿಗ್ಗೆ 09:45 ರಿಂದ ಮಧ್ಯಾಹ್ನ 12:30 ರ ನಡುವಿನ ಅವಧಿಯಲ್ಲಿ ಅವರು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ (UDR) ಕ್ರಮಾಂಕ 31/2026 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಲಂ 194 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




