ಬೆಂಗಳೂರು: ತಮಿಳುನಾಡಿನಲ್ಲಿ ಖೋಟಾನೋಟು ಪ್ರಿಂಟ್ ಮಾಡಿ ನಗರದಲ್ಲಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ಬಯಲಿಗೆಳೆದಿರುವ ಚಾಮರಾಜಪೇಟೆ ಪೊಲೀಸರು, ಈ ಸಂಬಂಧ 7 ಮಂದಿ ಆರೋಪಿಗಳನ್ನು ಬಂಧಿಸಿ, 21 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳನ್ನು ಜಪ್ತಿ ಮಾಡಿದ್ಧಾರೆ.
ಇತ್ತೀಚೆಗೆ ಚಾಮರಾಜಪೇಟೆಯಲ್ಲಿ ಇಬ್ಬರು ವ್ಯಕ್ತಿಗಳು ನಕಲಿ ನೋಟುಗಳ ಚಲಾವಣೆಗೆ ಯತ್ನಿಸುವಾಗ ಮಾಹಿತಿ ಆಧರಿಸಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಮಿಳುನಾಡಿನಲ್ಲಿ ಪ್ರಿಂಟಿಂಗ್ ಮಷಿನ್ ಇಟ್ಟುಕೊಂಡಿರುವುದು ಗೊತ್ತಾಗಿದೆ. ಈ ಬಗ್ಗೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಸತ್ಯ, ಮುರುಗೇಶ್, ಗೋವಿಂದನ್, ಬರ್ಕತ್, ಶರವಣನ್, ಲಕ್ಷ್ಮಣ್ ಹಾಗೂ ಕೃಷ್ಣ ಎಂಬುವರನ್ನು ಬಂಧಿಸಿ 21 ಲಕ್ಷ ರೂ. ಖೋಟಾನೋಟು, ಪ್ರಿಂಟಿಂಗ್ ಮಷಿನ್ಗಳು, ಕಾಗದಪತ್ರಗಳು, ಲ್ಯಾಪ್ಟಾಪ್ ಸೇರಿದಂತೆ ಪ್ರಿಂಟಿಂಗ್ಗೆ ಬಳಸುತ್ತಿದ್ದ 17 ರೀತಿಯ ವಿವಿಧ ಉಪಕರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಖೋಟಾನೋಟು ಜಾಲದಲ್ಲಿ ಒಟ್ಟು 11 ಮಂದಿ ಆರೋಪಿಗಳು ಶಾಮೀಲಾಗಿದ್ದು, ಸದ್ಯ ಏಳು ಆರೋಪಿಗಳನ್ನು ಬಂಧಿಸಿ ಉಳಿದವರಿಗಾಗಿ ಶೋಧ ಕಾರ್ಯ ಚುರುಕುಗೊಳಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಮಾಹಿತಿ ನೀಡಿದ್ದಾರೆ.




