ಸುಳ್ಯ: ವಿದ್ಯುತ್ ಶಾಕ್ ತಗುಲಿ ಇಬ್ಬರು ಮೃತಪಟ್ಟಿದ್ದು, ಓರ್ವ ಬಾಲಕ ಗಾಯಗೊಂಡಿರುವ ಘಟನೆ ತಾಲೂಕಿನ ಕಲ್ಮಡ್ಕ ಗ್ರಾಮದ ಬೊಮ್ಮೆಟ್ಟಿಯಲ್ಲಿ ನಡೆದಿದೆ.
ಮೃತರನ್ನು ಸುಳ್ಯದ ಕಲ್ಮಡ್ಕ ನಿವಾಸಿ ರಮೇಶ್ ಅಲಿಯಾಸ್ ಗಣೇಶ್ (36) ಮತ್ತು ಬೆಳ್ತಂಗಡಿಯ ಗುರುವಾಯನಕೆರೆ ನಿವಾಸಿ ಭರತ್ (28) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಅ.12 ರಂದು ಮೀನು ಹಿಡಿಯಲೆಂದು ಭರತ್ ಮತ್ತು ಗಣೇಶ್ ಅವರು ಇನ್ನೊಬ್ಬ ಅಪ್ರಾಪ್ತ ಬಾಲಕನೊಂದಿಗೆ ಸುಳ್ಯದ ಕಲ್ಮಡ್ಕ ಗ್ರಾಮದಲ್ಲಿನ ಹೊಳೆಕ್ಕೆರೆ ಎಂಬಲ್ಲಿಗೆ ತೆರಳಿದ್ದಾರೆ. ಈ ವೇಳೆ ಅವರು ತೋಡಿನಲ್ಲಿ ಹರಿಯುವ ನೀರಿನಲ್ಲಿ ಮೀನು ಹಿಡಿಯುತ್ತಾ ಮುಂದೆ ಸಾಗಿದ್ದು, ಅದರ ಪಕ್ಕದಲ್ಲಿನ ಮಧುಸೂದನ್ ಭಟ್ ಎಂಬವರ ತೋಟದಿಂದ ವಿದ್ಯುತ್ ಪ್ರವಹಿಸಿ ಬಿದ್ದಿದ್ದಾರೆ.
ಇದನ್ನು ನೋಡಿದ ಜೊತೆಗಿದ್ದ ಅಪ್ರಾಪ್ತ ಬಾಲಕ ತನ್ನ ಸಂಬಂಧಿಕರಿಗೆ ಈ ವಿಷಯವನ್ನು ತಿಳಿಸಿ ಅವರನ್ನು ಕೆ.ವಿ.ಜಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ವೈದ್ಯರು ಪರೀಕ್ಷಿಸಿ ಭರತ್ ಮತ್ತು ಗಣೇಶ್ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಹಾಗೂ ಗಾಯಗೊಂಡ ಬಾಲಕನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ.
ಅನಧಿಕೃತವಾಗಿ ತೋಟಕ್ಕೆ ವಿದ್ಯುತ್ ಅಳವಡಿಸಿರುವ ಮಧುಸೂದನ್ ಭಟ್ ಅವರ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 59/2026 ಕಲಂ 105 ಬಿಎನ್ಎಸ್ ಮತ್ತು 135(1)(E) ಎಲೆಕ್ಟ್ರಿಸಿಟಿ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ.




