ಮಂಗಳೂರು: ವಿಶ್ವಸಾಗರ ದಿನಾಚರಣೆಯ ಅಂಗವಾಗಿ ಇಂದು ‘ಸ್ವಚ್ಛ ಕರಾವಳಿ ಸುರಕ್ಷಿತ ಸಾಗರ’ ಎಂಬ ಅಭಿಯಾನದಡಿ ಪಣಂಬೂರು ಕಡಲ ತೀರವನ್ನು ಸ್ವಚ್ಛಗೊಳಿಸಲಾಯಿತು.
ಭಾರತ ಸರಕಾರದ ಭೂವಿಜ್ಞಾನ ಮಂತ್ರಾಲಯ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹಾಗೂ ದ.ಕ.ಜಿಲ್ಲಾಡಳಿತದ ವತಿಯಿಂದ ಕಡಲ ತೀರ ಸ್ವಚ್ಛತಾ ಅಭಿಯಾನ ಮತ್ತು ಸ್ವಚ್ಛ ಅಮೃತ ಮಹೋತ್ಸವ ಕಾರ್ಯಕ್ರಮವು ನಡೆಯಿತು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಕೋಸ್ಟ್ಗಾರ್ಡ್, ಎನ್ಸಿಸಿ, ಎನ್ ಎಸ್ ಎಸ್, ಸಂಘ-ಸಂಸ್ಥೆಗಳು ಹಾಗೂ ಸ್ಥಳೀಯರ ಸಹಕಾರದಿಂದ ಕಡಲ ಸ್ವಚ್ಛತೆಯನ್ನು ಮಾಡಲಾಯಿತು.
ಈ ಸಂದರ್ಭ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾಡಿ, ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ದೇಶದಲ್ಲಿ ಸ್ವಚ್ಛತಾ ಆಂದೋಲನ ಆರಂಭವಾಗಿದೆ. ಆದರೆ ಕಡಲ ತೀರದ ಸ್ವಚ್ಛತಾ ಅಭಿಯಾನ ಕಳೆದ ಹತ್ತಾರು ವರ್ಷಗಳಿಂದ ಇದ್ದರೂ, ಅದಕ್ಕೆ ಮಹತ್ವವನ್ನು ಕೊಡುವ ಕಾರ್ಯವನ್ನು ಪ್ರಧಾನಿಯವರು ಮಾಡಿದ್ದಾರೆ. ಇಂದು ಸ್ವಚ್ಛ ಸಾಗರ ಅಭಿಯಾನದಡಿಯಲ್ಲಿ ಕರಾವಳಿ ಪ್ರದೇಶದ ಸಮುದ್ರ ತೀರಗಳನ್ನು ಸ್ವಚ್ಛತೆ ಮಾಡುವ ಕಾರ್ಯವನ್ನು ಬಹಳ ಯಶಸ್ವಿಯಾಗಿ ಮಾಡಲಾಗಿದೆ ಎಂದು ಹೇಳಿದರು.
ಈ ವೇಳೆ ಡಾ.ವೈ.ಭರತ್ ಶೆಟ್ಟಿ, ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಮಂಗಳೂರು ಮನಪಾ ಆಯುಕ್ತ ಡಾ.ಅಕ್ಷಯ್ ಶ್ರೀಧರ್ ಹಾಗೂ ಕೋಸ್ಟ್ ಗಾರ್ಡ್ ಅಧಿಕಾರಿಗಳು ಉಪಸ್ಥಿತರಿದ್ದರು. ಪಣಂಬೂರು ಬೀಚ್ ಅಲ್ಲದೆ ಸಸಿಹಿತ್ಲು ಬೀಚ್ ನಿಂದ ಮುಕ್ಕ, ಸುರತ್ಕಲ್ ಲೈಟ್ ಹೌಸ್, ದೊಡ್ಡಕೊಪ್ಪ, ಗುಡ್ಡೆಕೊಪ್ಲ, ಇಡ್ಯಾ, ಹೊಸಬೆಟ್ಟು, ಚಿತ್ರಾಪುರ, ಬೈಕಂಪಾಡಿ, ತಣ್ಣೀರು ಬಾವಿ, ಬೆಂಗ್ರೆ, ಉಳ್ಳಾಲ, ಸೋಮೇಶ್ವರ, ಕೋಟೆಕಾರ್, ತಲಪಾಡಿಯವರೆಗೆ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ.