ಬೆಂಗಳೂರು: ಒಂದೇ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ದಾಂಪತ್ಯ ಕಲಹದ ಸಂದರ್ಭದಲ್ಲಿ ಪತ್ನಿಯ ಪರ ನಿಂತಿದ್ದಕ್ಕೆ ಇಂದು ಶೇಖರ್ 7 ಜನರನ್ನು ರುಬ್ಬುವ ಕಲ್ಲಿನಿಂದ ಹತ್ಯೆ ಮಾಡಿರುವ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಬಳಿಕ ಮೃತದೇಹಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಎಸೆದು ಪರಾರಿಯಾಗಲು ಯತ್ನಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಇಂದುಶೇಖರ್ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದು, ಎರಡು ದಿನಗಳ ಹಿಂದೆ ನಡೆದಿದ್ದ ಹತ್ಯಾಕಾಂಡ ತಡವಾಗಿ ಬೆಳಕಿಗೆ ಬಂದಿದೆ.
ಪೂರ್ವಯೋಜಿತವಾಗಿ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿ, ಮೊದಲು ಪತ್ನಿಯನ್ನು ತನ್ನ ಮನೆಯಲ್ಲೇ ರುಬ್ಬುಗುಂಡಿನಿಂದ ಹೊಡೆದು ಕೊಂದಿದ್ದಾನೆ. ಬಳಿಕ ಆಕೆಯ ಕುಟುಂಬದವರಿಗೆ ಅನುಮಾನ ಬಾರದಂತೆ ಸುನೀತಾ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ. ನಂತರ ಮದ್ಯಪಾನದ ನೆಪದಲ್ಲಿ ಬಾಮೈದರಾದ ಶಿವಕುಮಾರ್ ಮತ್ತು ಶಂಕರ್, ಅವರ ಪತ್ನಿಯರಾದ ನಳಿನಿ, ದಿವ್ಯಾ, ಅತ್ತೆ ರೂಪವತಿ ಹಾಗೂ ಬಾಲಕ ಪುನೀತ್ನನ್ನು ಸೇರಿದಂತೆ ಕಳೆದ 15-20 ದಿನಗಳಿಂದ ಒಬ್ಬೊಬ್ಬರನ್ನೇ ಕರೆಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶ್ರೀರಾಮಪುರದ ರೂಪವತಿ, ಆಕೆಯ ಮಗಳು ಸುನೀತಾ, ಪುತ್ರರಾದ ಶಿವಕುಮಾರ್ ಮತ್ತು ಶಂಕರ್, ಸೊಸೆಯಂದಿರಾದ ದಿವ್ಯಾ ಮತ್ತು ನಳಿನಿ ಹಾಗೂ ಏಳು ವರ್ಷದ ಮೊಮ್ಮಗ ಪುನೀತ್ ಮೃತಪಟ್ಟ ದುರ್ದೈವಿಗಳು. ಸುಮಾರು 20 ವರ್ಷಗಳ ಹಿಂದೆ ಸುನೀತಾಳನ್ನು ವಿವಾಹವಾಗಿದ್ದ ಇಂದುಶೇಖರ್, ಪತ್ನಿ ತನ್ನ ತವರು ಮನೆಯವರೊಂದಿಗಿನ ಸಂಬಂಧವನ್ನು ಮುಂದುವರಿಸಿದ್ದಕ್ಕೆ ಅಸಮಾಧಾನ ಹೊಂದಿದ್ದ . ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಪತ್ನಿಯ ತಾಯಿ ಮತ್ತು ಸಹೋದರರು ಆಕೆಯ ಪರವಾಗಿ ನಿಲ್ಲುತ್ತಿದ್ದುದೂ ಆರೋಪಿಗೆ ಕೋಪ ತರಿಸಿತ್ತು.
ನಳಿನಿ ನಿಗೂಢವಾಗಿ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆಕೆಯ ತಾಯಿ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು, ಇಂದುಶೇಖರ್ನನ್ನು ವಿಚಾರಣೆಗೊಳಪಡಿಸಿದಾಗ ಆತ ನೀಡಿದ ಗೊಂದಲಕಾರಿ ಹೇಳಿಕೆಗಳು ಅನುಮಾನಕ್ಕೆ ಕಾರಣವಾಗಿದ್ದವು. ಬಳಿಕ ಆತನ ಮನೆಯ ಪರಿಶೀಲನೆ ನಡೆಸಿದಾಗ ಹತ್ಯೆಗೆ ಸಂಬಂಧಿಸಿದ ಸುಳಿವುಗಳು ಲಭ್ಯವಾಗಿವೆ. ತೀವ್ರ ವಿಚಾರಣೆ ವೇಳೆ ಆರೋಪಿ ಕೃತ್ಯ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಹತ್ಯೆಯ ಬಳಿಕ ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ಸುತ್ತಮುತ್ತ ಎಸೆದಿದ್ದಾನೆ. ಗುರುವಾರ ಪೊಲೀಸರು ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದು ಶೋಧ ಕಾರ್ಯಾಚರಣೆ ನಡೆಸಿದ್ದು, ಸತತ ನಾಲ್ಕು ಗಂಟೆಗಳ ಹುಡುಕಾಟದ ಬಳಿಕ ಬಾಲಕ ಪುನೀತ್ನ ಮೃತದೇಹ ಪತ್ತೆಯಾಗಿದೆ. ಉಳಿದ ಮೃತದೇಹಗಳಿಗಾಗಿ ಶೋಧ ಮುಂದುವರಿದಿದೆ.
ಹತ್ಯೆಯ ಬಳಿಕ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿ ರುಬ್ಬುಗುಂಡನ್ನೂ ತೊಳೆದಿಟ್ಟಿದ್ದ ಆರೋಪಿ, ಮೃತದೇಹ ಸಾಗಿಸಲು ಬಳಸಿದ್ದ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಕರಣದ ಗಂಭೀರತೆ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದು, ಹತ್ಯೆಯ ಸಂಪೂರ್ಣ ಹಿನ್ನೆಲೆ ಹಾಗೂ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಆರೋಪಿ ಇಂದುಶೇಖರ್ ‘ಠಾಣಾ ವರದಿ’ ಎಂಬ ಪತ್ರಿಕೆ ನಡೆಸುತ್ತಿದ್ದು, ಕಳೆದ 8 ವರ್ಷಗಳಿಂದ ಭಾಷ್ಯಂ ಸರ್ಕಲ್ ಬಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದನು. ಮನೆ ಮಾಲೀಕರ ನಕಲಿ ಸಹಿ ಮಾಡಿ ಬಿಲ್ಡಿಂಗ್ ಮೇಲೆ ನ್ಯಾಯಾಲಯದಲ್ಲಿ ಕೇಸ್ ಹಾಕಿದ್ದ ಆರೋಪಿ, ಮಾಲೀಕರಿಗೆ ನಿರಂತರ ಕಿರುಕುಳ ನೀಡುತ್ತಿದ್ದನು. ಈ ಮಾನಸಿಕ ಕೊರಗಿನಿಂದಲೇ ಕಟ್ಟಡದ ಮಾಲೀಕರು ಸಾವನ್ನಪ್ಪಿದ್ದರು ಎಂಬ ಸತ್ಯ ತನಿಖೆಯಲ್ಲಿ ತಿಳಿದುಬಂದಿದೆ.
ಈ ಸಾಮೂಹಿಕ ಹತ್ಯಾಕಾಂಡದ ಸುದ್ದಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ರಾಜಾಜಿನಗರ ಪೊಲೀಸ್ ಠಾಣೆಗೆ ದೌಡಾಯಿಸಿದ್ದಾರೆ. ಪಶ್ಚಿಮ ವಿಭಾಗದ ಜಂಟಿ ಆಯುಕ್ತ ವಂಶಿಕೃಷ್ಣ ಹಾಗೂ ಉತ್ತರ ವಿಭಾಗದ ಡಿಸಿಪಿ ನೇಮಗೌಡ ಠಾಣೆಯಲ್ಲೇ ಮೊಕ್ಕಾಂ ಹೂಡಿ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಗಂಭೀರತೆ ಪರಿಗಣಿಸಿ ಡಿಸಿಪಿ ನೇತೃತ್ವದಲ್ಲಿ ಮೂವರು ಎಸಿಪಿಗಳ ವಿಶೇಷ ತಂಡವನ್ನು ರಚಿಸಲಾಗಿದೆ. ನಂದಿಬೆಟ್ಟದ ಸುತ್ತಮುತ್ತ ಎಸೆಯಲಾದ ಉಳಿದ ಮೃತದೇಹಗಳ ಪತ್ತೆಗೆ ಹಾಗೂ ಸಾಕ್ಷ್ಯ ಸಂಗ್ರಹಕ್ಕೆ ಪೊಲೀಸರು ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ಒಬ್ಬೊಬ್ಬರನ್ನೇ ಕರೆಸಿಕೊಂಡು ಬಾಡೂಟದ ಆಮಿಷವೊಡ್ಡಿ, ಊಟದಲ್ಲಿ ಮತ್ತಿನ ಮಾತ್ರೆಗಳನ್ನು ಬೆರೆಸಿ ಪ್ರಜ್ಞಾಹೀನರನ್ನಾಗಿ ಮಾಡಿ, ನಂತರ ಒರಳುಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಕೊಲೆ ನಂತರ ಮೃತದೇಹಗಳನ್ನು ಕಾರಿನಲ್ಲಿ ಸಾಗಿಸಿ ಬೇರೆ ಬೇರೆ ಕಡೆ ಎಸೆದಿರುವುದು ಬೆಳಕಿಗೆ ಬಂದಿದೆ. ನಂದಿಬೆಟ್ಟದ ಸುತ್ತಮುತ್ತ ಏಳು ವರ್ಷದ ಪುನೀತ್ನ ಶವ ಪತ್ತೆಯಾಗಿದ್ದು, ಇತರ ಶವಗಳ ಶೋಧ ಕಾರ್ಯ ನಡೆಯುತ್ತಿದೆ.ಅಪ್ರಾಪ್ತ ಮಗಳಿಗೆ ಆರೋಪಿ ಬ್ರೈನ್ ವಾಷ್ ಮಾಡಿದ್ದಾನೆ. ನಂತರ 15 ರಿಂದ 20 ದಿನಗಳ ಅಂತರದಲ್ಲಿ ಒಬ್ಬೊಬ್ಬರೇ ಮಿಸ್ ಆಗಿದ್ದಾರೆ. ನವೆಂಬರ್ 3ಕ್ಕೆ ಮಿಸ್ಸಿಂಗ್ ಕಪ್ಲೆಂಟ್ ಆಗಿದೆ. ಆರೋಪಿಯೇ ಡಿಸಿಸ್ ಮೊಬೈಲ್ ಇಂದ ಮಾಡಿದ್ದಾನೆ ಅಂತಾ ವಿವರಿಸಿದ್ದಾರೆ




