ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ಸೌಂದರ್ಯವರ್ಧಕ ಉತ್ಪನ್ನಗಳ ಜಾಹೀರಾತುಗಳನ್ನು ನಂಬಿ ಖರೀದಿಸುವ ಮುನ್ನ ಗ್ರಾಹಕರು ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ. ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್‌ಗಳ ಪ್ರಚಾರಕ್ಕೆ ಮರುಳಾಗಿ ಫೇರ್‌ನೆಸ್ ಕ್ರೀಮ್ ಬಳಸಿದ 17 ವರ್ಷದ ಬಾಲಕಿಯೊಬ್ಬಳು ಗಂಭೀರ ಕಿಡ್ನಿ ಕಾಯಿಲೆಗೆ ತುತ್ತಾಗಿರುವ ಘಟನೆ ಕೇರಳದ ಮಲಪ್ಪುರಂನಲ್ಲಿ ಆತಂಕ ಮೂಡಿಸಿದೆ.
ಮೊಡವೆ, ಕಪ್ಪು ಕಲೆ ಹಾಗೂ ಪಿಗ್ಮೆಂಟೇಷನ್ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ಜಾಹೀರಾತನ್ನು ನಂಬಿ ಬಾಲಕಿ ಸುಮಾರು ಒಂದು ವರ್ಷ ಈ ಕ್ರೀಮ್ ಬಳಸಿದ್ದಳು ಎನ್ನಲಾಗಿದೆ. ಆದರೆ, ಆಕೆಯ ದೇಹದಲ್ಲಿ ಅಪಾಯಕಾರಿ ಪ್ರಮಾಣದ ಪಾದರಸ ಪತ್ತೆಯಾಗಿದ್ದು, ಕಿಡ್ನಿಯ ಕಾರ್ಯನಿರ್ವಹಣೆಯ ಮೇಲೂ ಗಂಭೀರ ಪರಿಣಾಮ ಬೀರಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಬಾಲಕಿ ಬಳಸುತ್ತಿದ್ದ ಫೇರ್‌ನೆಸ್ ಕ್ರೀಮ್ ಅನ್ನು ಪರೀಕ್ಷಿಸಿದಾಗ ಬರೋಬ್ಬರಿ 12,500 PPM ಪ್ರಮಾಣದ ಮರ್ಕ್ಯುರಿ (ಪಾದರಸ) ಅಂಶ ಪತ್ತೆಯಾಗಿದೆ. ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಪಾದರಸದ ಅನುಮತಿಸಲಾದ ಮಿತಿ 1 PPMಗಿಂತ ಕಡಿಮೆಯಿದ್ದು, ಈ ಕ್ರೀಮ್‌ನಲ್ಲಿ ಪತ್ತೆಯಾದ ಪ್ರಮಾಣ ಆತಂಕಕಾರಿಯಾಗಿದೆ.
ಪಾದರಸದಂತಹ ವಿಷಕಾರಿ ಲೋಹಗಳು ದೇಹವನ್ನು ಪ್ರವೇಶಿಸಿದರೆ ಮೂತ್ರಪಿಂಡಗಳ ಕಾರ್ಯನಿರ್ವಹಣೆಗೆ ಹಾನಿಯುಂಟಾಗಬಹುದು. ಬಾಲಕಿಯ ಕಿಡ್ನಿಯ ಫಿಲ್ಟರಿಂಗ್ ಘಟಕಗಳಿಗೆ ಹಾನಿಯಾಗಿದ್ದು, ಮೆಂಬ್ರೇನಸ್ ನೆಫ್ರೋಪತಿ (Membranous Nephropathy) ಎಂಬ ಗಂಭೀರ ಕಾಯಿಲೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕಾಲುಗಳಲ್ಲಿ ಊತ, ರಕ್ತದೊತ್ತಡದಲ್ಲಿ ಏರುಪೇರು ಹಾಗೂ ಪ್ರಜ್ಞೆ ತಪ್ಪುವಂತಹ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾಲಕಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಘಟನೆಗೆ ಸಂಬಂಧಿಸಿದಂತೆ ಕೇರಳ ಸರ್ಕಾರ ತನಿಖೆಗೆ ಸೂಚನೆ ನೀಡಿದ್ದು, ಮಕ್ಕಳ ಹಕ್ಕುಗಳ ಆಯೋಗವೂ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಕ್ರೀಮ್‌ನ ಗುಣಮಟ್ಟ, ಅದರಲ್ಲಿರುವ ರಾಸಾಯನಿಕ ಅಂಶಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾದ ಜಾಹೀರಾತುಗಳ ಸತ್ಯಾಸತ್ಯತೆ ಕುರಿತು ಪರಿಶೀಲನೆ ನಡೆಯಬೇಕಿದೆ.
ಈ ಘಟನೆ ಆನ್‌ಲೈನ್‌ನಲ್ಲಿ ಪ್ರಚಾರವಾಗುವ ಸೌಂದರ್ಯವರ್ಧಕ ಉತ್ಪನ್ನಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸೆಲೆಬ್ರಿಟಿಗಳು ಅಥವಾ ಇನ್‌ಫ್ಲುಯೆನ್ಸರ್‌ಗಳು ಪ್ರಚಾರ ಮಾಡುತ್ತಾರೆ ಎಂಬ ಕಾರಣಕ್ಕೆ ಯಾವುದೇ ಉತ್ಪನ್ನವನ್ನು ಸುರಕ್ಷಿತವೆಂದು ಭಾವಿಸಿ ಬಳಸುವುದು ಅಪಾಯಕಾರಿ. ಸೌಂದರ್ಯವರ್ಧಕ ಉತ್ಪನ್ನಗಳನ್ನು ಖರೀದಿಸುವ ಮುನ್ನ ಅದರ ಲೇಬಲ್, ತಯಾರಕರ ವಿವರ, ಪದಾರ್ಥಗಳ ಪಟ್ಟಿ, ಪರವಾನಗಿ ಹಾಗೂ ಮುಕ್ತಾಯ ದಿನಾಂಕವನ್ನು ಪರಿಶೀಲಿಸುವುದು ಅಗತ್ಯ.
ಅದರಲ್ಲೂ ಅತೀ ಕಡಿಮೆ ಅವಧಿಯಲ್ಲಿ ಚರ್ಮದ ಬಣ್ಣ ಬದಲಾಯಿಸುವ, ಮೊಡವೆ ಹಾಗೂ ಕಪ್ಪು ಕಲೆ ಸೇರಿದಂತೆ ಎಲ್ಲ ಚರ್ಮದ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿವಾರಿಸುವುದಾಗಿ ಭರವಸೆ ನೀಡುವ ಉತ್ಪನ್ನಗಳ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕು. ಸೌಂದರ್ಯಕ್ಕಿಂತ ಆರೋಗ್ಯ ಮುಖ್ಯ ಎಂಬುದನ್ನು ಇಂತಹ ಘಟನೆಗಳು ಮತ್ತೊಮ್ಮೆ ನೆನಪಿಸಿವೆ.




